ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಟ್ರೋ ರೈಲು ನಿಲ್ದಾಣಗಳಿಗೆ ಭೌಗೋಳಿಕ ಮಹತ್ವ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿ ನಾಮಕರಣ ಮಾಡುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಟ್ರೋ ರೈಲು ನಿಲ್ದಾಣಗಳಿಗೆ ಭೌಗೋಳಿಕ ಮಹತ್ವ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿ ನಾಮಕರಣ ಮಾಡುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ. ಪ್ರಸ್ತುತ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲ ಮೆಟ್ರೋ ನಿಲ್ದಾಣಗಳ ಹೆಸರುಗಳು ನಿಲ್ದಾಣ ಇರುವ ನಿಖರ ಸ್ಥಳ ಅಥವಾ ಆ ಪ್ರದೇಶದ ಜನರಿಗೆ ಹೆಚ್ಚು ಪರಿಚಿತವಾಗಿರುವ ಸ್ಥಳೀಯ ಹೆಸರನ್ನು ಪ್ರತಿಬಿಂಬಿಸುವುದಿಲ್ಲ. ಇದರಿಂದ ಜನರಿಗೆ ನಿಲ್ದಾಣಗಳ ಸ್ಥಳ ಗುರುತಿಸುವಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ ನಿಲ್ದಾಣಗಳ ಹೆಸರು ಅಂತಿಮಗೊಳಿಸುವ ಸಂದರ್ಭದಲ್ಲಿ ನಿಲ್ದಾಣ ಇರುವ ಸ್ಥಳೀಯ ಪ್ರದೇಶದ ಪ್ರಚಲಿತ ಹೆಸರು, ಸ್ಥಳೀಯವಾಗಿ ಸಾರ್ವಜನಿಕರು ಹೆಚ್ಚು ಪರಿಚಿತವಾಗಿರುವ ಹೆಸರು, ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹಾಗೂ ಪ್ರಯಾಣಿಕರು ಸುಲಭವಾಗಿ ಗುರುತಿಸಲು ಅನುಕೂಲವಾಗುವ ಹೆಸರನ್ನಿಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸದ್ಯ ಜೆಪಿ ನಗರ 4ನೇ ಹಂತ ಮೆಟ್ರೋ ನಿಲ್ದಾಣವನ್ನು ಎನ್‌ಎಸ್ ಪಾಳ್ಯ ಮೆಟ್ರೋ ನಿಲ್ದಾಣ, ತಾವರೆಕೆರೆ ಮೆಟ್ರೋ ನಿಲ್ದಾಣವನ್ನು ಎಸ್‌ಜಿ ಪಾಳ್ಯ ಮೆಟ್ರೋ ನಿಲ್ದಾಣ ಹಾಗೂ ಡೈರಿ ವೃತ್ತ ಮೆಟ್ರೋ ನಿಲ್ದಾಣವನ್ನು ಲಕ್ಕಸಂದ್ರ ಮೆಟ್ರೋ ನಿಲ್ದಾಣ ಎಂದು ಬದಲಿಸುವುದು ಸೂಕ್ತ. ಈ ನಿಲ್ದಾಣಗಳ ಮರುನಾಮಕರಣ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.