ಚುನಾವಣೆ ಖರ್ಚಿನ ನೆಪದಲ್ಲಿ ₹1 ಲಕ್ಷ ದುರುಪಯೋಗ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡೇರಿ ನಿರ್ದೇಶಕ ಪುಟ್ಟಲಿಂಗಯ್ಯ ಪುತ್ರ ಎಂ.ಪಿ.ಯೋಗೇಶ್, ತಮ್ಮ ತಂದೆ ಪುಟ್ಟಲಿಂಗಯ್ಯ ಅನಕ್ಷರಸ್ಥರೆಂಬ ಕಾರಣಕ್ಕೆ ಡೇರಿಯಲ್ಲಿ ನಾಮಕಾವಸ್ಥೆ ನಿರ್ದೇಶಕರನ್ನಾಗಿ ಮಾಡಿಕೊಳ್ಳಲಾಗಿದೆ. ಸಂಘದಲ್ಲಿ ನಡೆದಿರುವ ಲಕ್ಷಾಂತರ ರು. ಅವ್ಯವಹಾರ ಖಂಡಿಸಿ ರಾಜೀನಾಮೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಭೆಯ ಪೂರ್ವಭಾವಿ ನೋಟಿಸ್ ನೀಡದೆ ಕಾರ್ಯಕಾರಿ ಸಭೆ, ಮಹಾಸಭೆ ಹಾಗೂ ಚುನಾವಣೆಗಳನ್ನು ಯಾವ ಸದಸ್ಯರ ಗಮನಕ್ಕೂ ಬಾರದ ರೀತಿಯಲ್ಲಿ ಸರ್ವಾಧಿಕಾರಿಯಂತೆ 20 ವರ್ಷಗಳಿಂದ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಚುನಾವಣೆ ಖರ್ಚಿನ ನೆಪದಲ್ಲಿ 1 ಲಕ್ಷ ರು. ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಚುನಾವಣೆಯನ್ನೇ ನಡೆಸದೆ ಅಧ್ಯಕ್ಷರಾದ ಪಿ.ನಾಗರಾಜು ಒಂದು ಲಕ್ಷ ರು. ಖರ್ಚು ಎಂದು ತೋರಿಸಿದ್ದಾರೆ. ಪುಟ್ಟಲಿಂಗಯ್ಯ ನಿರ್ದೇಶಕರಾದ ಮೇಲೆ ಒಂದೇ ಒಂದು ಸಭೆಗೆ ಸೂಚನಾ ಪತ್ರ ನೀಡಿಲ್ಲ. ಸ್ವಂತ ಆಸ್ತಿಯಲ್ಲಿ ನಿವೇಶನ ಖರೀದಿಸುವ ಮುನ್ನ ಯಾರಿಗೂ ಹೇಳಿಲ್ಲ. ಖರೀದಿಸಿರುವ ನಿವೇಶನ ಬಿಟ್ಟು ಬೇರೆ ನಿವೇಶನದಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ದೂರಿದರು.ಗ್ರಾಮದ ಅಂಚಿನಲ್ಲಿಯೇ ಕಡಿಮೆ ಬೆಲೆಯಲ್ಲಿ ಡೇರಿ ಕಟ್ಟಡಕ್ಕೆ ನಿವೇಶನ ಲಭ್ಯವಿದ್ದರೂ ಪಿ.ನಾಗರಾಜು ತಮ್ಮ ಆಸ್ತಿಯಲ್ಲಿ ಅತಿ ಹೆಚ್ಚು ಬೆಲೆ ನಿವೇಶನ ಖರೀದಿಸಲು ಮಹಾಸಭೆಯಲ್ಲಿ ತೀರ್ಮಾನ ಮಾಡಿಸಿದರು. ವರ್ಷಾನುಗಟ್ಟಲೆ ಸಂಘಕ್ಕೆ ಹಾಲು ಸರಬರಾಜು ಮಾಡಿದ ರೈತರಿಗೆ ಸದಸ್ಯತ್ವ ನೀಡದೆ ವಂಚಿಸುತ್ತಿರುವುದರ ಉದ್ದೇಶ ಏನೆಂದು ಪ್ರಶ್ನಿಸಿದರು.ಸಂಘದಲ್ಲಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಇಚ್ಚಾನುಸಾರ ವರ್ತಿಸುತ್ತಾ ವಂಚಿಸುತ್ತಾ ಅವ್ಯವಹಾರ, ಅಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ವರ್ತಿಸಲು ಸಾಧ್ಯವಿಲ್ಲದೆ ಮತ್ತು ಕುತಂತ್ರಕ್ಕೆ ಬಲಿಯಾಗಲು ಇಷ್ಟವಿಲ್ಲದೆ ಪುಟ್ಟಲಿಂಗಯ್ಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದರು.ಅವ್ಯವಹಾರದ ಆರೋಪ ಸತ್ಯಕ್ಕೆ ದೂರ
ರಾಮನಗರ: ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿವೇಶನ, ಕಟ್ಟಡ ನಿರ್ಮಾಣ ಹಾಗೂ ಚುನಾವಣೆ ಹೆಸರಿನಲ್ಲಿ ಲಕ್ಷಾಂತರ ರು. ಅವ್ಯವಹಾರ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಂಘದ ಅಧ್ಯಕ್ಷ ಪಿ.ನಾಗರಾಜು ಸ್ಪಷ್ಟನೆ ನೀಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಘಕ್ಕೆ ತಮ್ಮ ಸ್ವಂತ ಜಾಗ ನೀಡಿ ಹಣ ಕಬಳಿಸಿದ್ದಾರೆಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ, ನಾನೇ ಸಂಘದ ಕಟ್ಟಡಕ್ಕಾಗಿ 37 ಲಕ್ಷ ರು.ಖರ್ಚು ಮಾಡಿದ್ದೇನೆ. ರೈತರ ಹಣ ತಿನ್ನುವ ಪರಿಸ್ಥಿತಿ ನನಗೆ ಬಂದಿಲ್ಲ ಎಂದರು.
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇಗೆ ಸಂಘದ ಕಟ್ಟಡದ ಜಾಗ ಸ್ವಾಧೀನವಾದ ಹಿನ್ನೆಲೆಯಲ್ಲಿ 1 ಕೋಟಿ 11 ಲಕ್ಷ ಬಂದಿತು. ಆನಂತರ ಈಗಿರುವ ಕಟ್ಟಡದ ಜಾಗ ಅಡಿಗೆ 3 ಸಾವಿರ ಇದ್ದ ದರವನ್ನು 1900 ರು.ಗೆ ನಿಗದಿಪಡಿಸಿ 45 ಲಕ್ಷ ರು.ಗೆ ಖರೀದಿಸಿದೇವು. ಇದಕ್ಕಾಗಿ ಸಂಘದಲ್ಲಿ 37 ಲಕ್ಷ ರು. ಡ್ರಾ ಮಾಡಿಸಿದ್ದೇವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 10 ಲಕ್ಷ, ಸಂಘದಿಂದ 11 ಲಕ್ಷ ಪಡೆಯಲಾಗಿದೆ. ಉಳಿಕೆ ಹಣ ಸಂಘದಲ್ಲಿಯೇ ಇದೆ ಎಂದು ತಿಳಿಸಿದರು.