ಲಕ್ಷ್ಮೇಶ್ವರ: ಮಹರ್ಷಿ ವಾಲ್ಮೀಕಿಯವರ ಜೀವನ ಮೌಲ್ಯಗಳು ಇಂದಿಗೂ ಆದರ್ಶವಾಗಿದೆ. ಅವರು ಬರೆದ ರಾಮಾಯಣ ಗ್ರಂಥವು ಜಗತ್ತಿನ ಮಹಾಕಾವ್ಯ ಹಾಗೂ ಉತ್ಕೃಷ್ಟ ಗ್ರಂಥವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಬಣ್ಣಿಸಿದರು.
ಭಾನುವಾರ ಸಮೀಪದ ಶಿಗ್ಲಿ ಗ್ರಾಮದ ಜಿಎಸ್‌ಎಸ್ ಶಾಲೆಯಲ್ಲಿ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಾಲ್ಮೀಕಿ ರಚಿಸಿದ ಮಹಾನ್ ಕೃತಿಯು ಜಗತ್ತಿನ ಹಲವು ಮೊದಲನ್ನು ನೀಡಿದ ಗ್ರಂಥವಾಗಿದೆ. ರಾಮಯಾಣದ ಜೀವನ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ. ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೆ ಉತ್ತಮ ಶಿಕ್ಷಣ ಪಡೆದು ಸುಧಾರಣೆ ತರುವ ಕಾರ್ಯ ಮಾಡಬೇಕು ಎಂದರು.
ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ವಾಲ್ಮೀಕಿ ಸಮಾಜವು ಸ್ವಾಭಿಮಾನಕ್ಕೆ ಹೆಸರಾಗಿದೆ. ವಾಲ್ಮೀಕಿಯವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳೋಣ. ಎಸ್‌ಟಿ ಸಮಾಜದ ಮೀಸಲಾತಿ ಪಡೆದು ಅಭಿವೃದ್ಧಿ ಹೊಂದಿದವರು ತಮ್ಮದೇ ಜನಾಂಗದ ಹಿಂದುಳಿದವರಿಗೆ ಅವಕಾಶ ಮಾಡಿಕೊಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕು ಎಂದರು.ಎಸ್.ಪಿ. ಬಳಿಗಾರ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ನಿವೃತ್ತ ನ್ಯಾಯಾಧೀಶ ಡಿ.ವೈ. ಬಸಾಪೂರ ಹಾಗೂ ಈಶ್ವರ ಪಶುಪತಿಹಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭೀಮಣ್ಣ ಯಂಗಾಡಿ, ರಾಮಣ್ಣ ತಳವಾರ, ರಾಮಣ್ಣ ಲಮಾಣಿ, ನೀಲಪ್ಪ ಸೂರಣಗಿ, ಅಶೋಕ ಶಿರಹಟ್ಟಿ, ರಂಜನ್ ಪಾಟೀಲ, ಯಲ್ಲಪ್ಪ ತಳವಾರ, ನಾಗರಾಜ ಮಡಿವಾಳರ, ಗದಿಗೆಪ್ಪ ತಳವಾರ, ಮೈಲಾರೆಪ್ಪ ಪಶುಪತಿಹಾಳ, ಎನ್.ಎನ್. ನೆಗಳೂರ, ರಾಜು ಓಲೇಕಾರ, ಬಸಣ್ಣ ಕಳಸದ ಸೇರಿದಂತೆ ಸಮಾಜದ ಅನೇಕರು ಇದ್ದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಮೂರ್ತಿಯ ಮೆರವಣಿಗೆ ನಡೆಯಿತು. ಸಮಾಜದ ಗುರು ಹಿರಿಯರು ಮುಖಂಡರು ಇದ್ದರು. ಕಲಾತಂಡಗಳ ಹಾಗೂ ತಾಯಂದಿರು ಅಕ್ಕತಂಗಿಯರಿಂದ ಕುಂಭಮೇಳ ಅದ್ಧೂರಿಯಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.