ಕನ್ನಡಪ್ರಭ ವಾರ್ತೆ ಮುಧೋಳ
ತಾಲೂಕಿನ ಶಿರೋಳ ಗ್ರಾಮದಲ್ಲಿ ಭಾನುವಾರ ರೈತ ನಾಯಕ ದಿ.ರಮೇಶ ಗಡದನ್ನವರ 64ನೇ ಜಯಂತ್ಯೋತ್ಸವ ನಿಮಿತ್ತ ರಮೇಶ ಗಡದನ್ನವರ ಅವರ ಕಂಚಿನ ಮೂರ್ತಿ ಅನಾವರಣ ಹಾಗೂ ರೈತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರ ನೀಡಿದ್ದ ಕೃಪಾಂಕ ರದ್ದುಪಡಿಸಿದ್ದನ್ನು ಖಂಡಿಸಿ ರಮೇಶ ಗಡದನ್ನವರ ಅವರು ಬೆಂಗಳೂರಿನಲ್ಲಿ ಬಿಗಿ ಭದ್ರತೆ ನಡುವೆಯೂ ಕಾರ್ಯಕ್ರಮದ ವೇದಿಕೆಗೆ ನುಗ್ಗಿ ಬಡ ಮಕ್ಕಳಿಗೆ ಕೃಪಾಂಕ ನೀಡದ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗಿದ್ದರು. ಅಂತಹ ಗಟ್ಟಿ ಗುಂಡಿಗೆಯ ನಾಯಕ ಇಂದು ಇಲ್ಲದಿರುವುದು ರೈತ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕಟ್ಟು ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಸುಭಾಷ ಶಿರಬೂರ ಮಾತನಾಡಿ, ಬಸವಾದಿ ಶರಣರ ತಳಹದಿ ಮೇಲೆ ಶಿಸ್ತುಬದ್ಧ ಹೋರಾಟ ಸಂಘಟಿಸಿ ರಾಜ್ಯಾದ್ಯಂತ ಹಸಿರು ಸೇನೆಯ ಶಕ್ತಿ ಪಸರಿಸಿದ ಕೀರ್ತಿ ರಮೇಶ ಗಡದನ್ನವರ ಅವರಿಗೆ ಸಲ್ಲುತ್ತದೆ. ರಮೇಶ ಗಡದನ್ನವರ ಅವಂರತಹ ಧೀಮಂತ ನಾಯಕನನ್ನು ಸಮಾಜಕ್ಕೆ ನೀಡಿದ ಅವರ ಮನೆಯವರಿಗೆ ನಾನು ಅಭಾರಿಯಾಗಿದ್ದೇನೆ ಎಂದರು.
ರಮೇಶ ಗಡದನ್ನವರ ಭಾವಚಿತ್ರ ಕುಂಭಸಹಿತ ಮೆರವಣಿಗೆ ಶಿರೋಳ ಗ್ರಾಮದಿಂದ ಕಾಡಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ವಿಠ್ಠಲ ದೇವಸ್ಥಾನ ತಳಗೇರಿ ಅವರ ಮನೆ ಗ್ರಾಮ ಪಂಚಾಯಿತಿ ಮಾರ್ಗವಾಗಿ ಶಿರೋಳ ಕ್ರಾಸ್‌ಗೆ ಬಂದು ಮುಕ್ತಾಯವಾಯಿತು. ಬಳಿಕ ಮೂರ್ತಿ ಉದ್ಘಾಟಿಸಲಾಯಿತು. ಶಿರೋಳ ಕ್ರಾಸ್ ಹತ್ತಿರ ಇರುವ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ರಾಮಾರೂಢ ಮಠದ ಶಂಕರಾರೂಢ ಶ್ರೀಗಳು, ಮರೆಗುದ್ದಿ ಅಡವಿಮಠದ ನಿರುಪಾದೀಶ್ವರ ಸಾನ್ನಿಧ್ಯ ವಹಿಸಿ ಮಾತನಾಡಿದರು.ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತಪ್ಪ ಕಾಂಬಳೆ, ರೈತ ಮುಖಂಡರಾದ ಹಣಮಂತಗೌಡ ಬಿ. ಪಾಟೀಲ, ರಾಕೇಶ ರಮೇಶ ಗಡದನ್ನವರ, ಹನುಮಂತ ನಬಾಬ, ಸುರೇಶ ಚಿಂಚಲಿ, ಅಶೋಕ ಶೆಟ್ಟರ, ಪರಸಪ್ಪ ಮುರನಾಳ, ದುಂಡಪ್ಪ ಯರಗಟ್ಟಿ, ಮಹೇಶಗೌಡ ಪಾಟೀಲ, ಈರಪ್ಪ ಹಂಚಿನಾಳ, ಯಂಕಣ್ಣ ಮಳಲಿ ಇತರರು ಭಾಗವಹಿದ್ದರು.