ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಶಿವರಾತ್ರಿಯ ದಿನ ಪುನರಾರಂಭವಾಗಲಿದೆ ಎಂದು ಕೆಫೆಯ ಮಾಲೀಕ ರಾಘವೇಂದ್ರ ರಾವ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆ ನಿನ್ನೆ-ಮೊನ್ನೆ ಹುಟ್ಟಿದ್ದಲ್ಲ.
2012ರಲ್ಲಿ ಕುಮಾರಪಾರ್ಕ್ ಬಳಿ ಫುಟ್‌ಪಾತ್‌ನಲ್ಲಿ ಶುರು ಮಾಡಿದ್ದೆವು. ಆಗಿನಿಂದಲೂ ಒಂದಲ್ಲ ಒಂದು ಕಷ್ಟ ಬರ್ತಿದೆ. ಎಲ್ಲವನ್ನೂ ನಿಭಾಯಿಸಿದ್ದೇವೆ.
ನಾನು ಕೋಲಾರ ಮೂಲದವನು. ಬಡ ಕುಟುಂಬದಿಂದ ಬಂದವನು. ಎಪಿಜಿ ಅಬ್ದುಲ್ ಕಲಾಂ ಅವರನ್ನು ಮಾದರಿಯಾಗಿ ತೆಗೆದುಕೊಂಡು ಈ ಹೋಟೆಲ್ ಪ್ರಾರಂಭ ಮಾಡಿದ್ದೆವು.
ಸುಮಾರು ಎರಡು ಸಾವಿರ ಮಂದಿ ಸಿಬ್ಬಂದಿ ಇದ್ದೇವೆ. ಎಲ್ಲರ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಹೋಟೆಲ್ ಬೆಳೆದು ನಿಂತಿದೆ ಎಂದರು.
ಕೆಫೆಯಲ್ಲಿ ನಡೆದ ಘಟನೆಯನ್ನು ಭಾರತೀಯರೆಲ್ಲರೂ ಖಂಡಿಸಬೇಕು. ಇದೆಲ್ಲ ಜೀವನದಲ್ಲಿ ಪಾಟ್ ಹೋಲ್ಸ್ ಇದ್ದ ಹಾಗೆ. ಕೆಫೆ ಸ್ವಚ್ಛಗೊಳಿಸುವ ಕೆಲಸ ಮಾಡಲಾಗುತ್ತಿದ್ದು, ಮುಂದಿನ ಶುಕ್ರವಾರ ಹೋಟೆಲ್ ಪುನರಾರಂಭವಾಗಲಿದೆ ಎಂದು ಹೇಳಿದರು.
ಹೋಟೆಲ್‌ನಲ್ಲಿ ನಮ್ಮ ಗಮನಕ್ಕೆ ಏನೇ ಬಂದರೂ ಪೊಲೀಸರ ಗಮನಕ್ಕೆ ತರುತ್ತೇವೆ. ಇದು ಹೋಟೆಲ್ ವ್ಯವಹಾರ ಸಂಬಂಧ ವಿರೋಧಿ ಕೃತ್ಯವೇ ಅಥವಾ ಬೇರೆ ಕೃತ್ಯವೇ ಎಂಬುದನ್ನು ಪೊಲೀಸರು ಹೇಳುತ್ತಾರೆ.
ಈ ಹಿಂದೆ ರಾಜಾಜಿನಗರ ಶಾಖೆಯಲ್ಲಿ ಎರಡು ಬ್ಯಾಗ್ ಕಂಡು ಬಂದಿದ್ದವು. ಆಗ ಬಸವೇಶ್ವರ ನಗರ ಠಾಣೆಗೆ ಮಾಹಿತಿ ನೀಡಿದ್ದೆವು. ಕುಂದಲಹಳ್ಳಿ ಶಾಖೆಯಲ್ಲಿ ಹೆಚ್ಚು ಜನ ಇದ್ದ ಕಾರಣ ಆ ಬ್ಯಾಗ್ ಯಾರದ್ದು ಎಂದು ಗೊತ್ತಾಗಿಲ್ಲ.
ಒಂದು ವೇಳೆ ವಾರಸುದಾರರು ಇಲ್ಲದ ವಸ್ತುಗಳು ಸಿಕ್ಕರೆ ಆ್ಯಪ್‌ನಲ್ಲಿ ಮಾಹಿತಿ ನೀಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹೋಟೆಲ್‌ಗೆ ಲೋಹ ಶೋಧಕ ಉಪಕರಣ ಅಳವಡಿಸಿಕೊಳ್ಳುವಂತೆ ಪೊಲೀಸರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನೂ ಅಳವಡಿಸಿಕೊಳ್ಳುತ್ತೇವೆ.
ಸದ್ಯ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯ ನಾಲ್ಕು ಶಾಖೆಗಳು ಹಾಗೂ ಹೈದರಾಬಾದ್‌ನಲ್ಲಿ ಒಂದು ಶಾಖೆ ಇದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಶಾಖೆಗಳನ್ನು ತೆರೆಯುತ್ತೇವೆ ಎಂದು ರಾಘವೇಂದ್ರ ರಾವ್ ಹೇಳಿದರು.