ಕನ್ನಡಪ್ರಭ ವಾರ್ತೆ ಸೊರಬ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಾಮದೇವ ಸಿಂಪಿ ಸಮಾಜ, ಬಜರಂಗದಳ, ವಿ.ಎಚ್.ಪಿ. ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಕುಪ್ಪೆ ಗ್ರಾಮದ ಶ್ರೀ ಸೀತಾರಾಮಲಕ್ಷ್ಮಣ ಸನ್ನಿಧಿಗೆ ಪಾದಯಾತ್ರೆ ನಡೆಸಿದರು. ಪಟ್ಟಣದ ನಾಮದೇವ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ಪಟ್ಟಣದ ಮುಖ್ಯರಸ್ತೆ ಮೂಲಕ ಸೊರಬದಿಂದ ಸಾಗರಕ್ಕೆ ತೆರಳುವ ಮಾರ್ಗ ಮಧ್ಯದ ಸುಮಾರು 8 ಕಿ.ಮೀ. ದೂರದ ತಾಲೂಕಿನ ಕುಪ್ಪೆ ಗ್ರಾಮಲ್ಲಿರುವ ಶ್ರೀ ಸೀತಾರಾಮಲಕ್ಷ್ಮಣ ದೇವಸ್ಥಾನಕ್ಕೆ ಸುಮಾರು 5 ನೂರಕ್ಕೂ ಅಧಿಕ ಶ್ರೀರಾಮ ಭಕ್ತರು ಪಾದಯಾತ್ರೆ ಮೂಲಕ ತೆರಳಿದರು.ಕುಪ್ಪೆ ಗ್ರಾಮವು ಪುರಾಣ, ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಸೀತಾ ಮಾತೆ, ಶ್ರೀ ರಾಮ, ಲಕ್ಷ್ಮಣ ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳುವ ಮಾರ್ಗ ಮಧ್ಯೆ ಸೀತಾಮಾತೆಗೆ ದೇಹಬಾಧೆ ತೀರಿಸಲು ಕುಪ್ಪೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ ಸೀತಾಮಾತೆಗೆ ನೀರಿನ ಅವಶ್ಯಕತೆ ಎದುರಾದಾಗ ಶ್ರೀ ರಾಮನು ದಂಡವನ್ನು ಪ್ರಯೋಗಿಸಿ ನೀರು ಭರಿಸಿದ್ದರು. ಈ ಮೂಲಕ ದಂಡಾವತಿ ನದಿ ಉಗಮವಾಯಿತು ಎಂಬ ಪ್ರತೀತಿ ಇದೆ. ಅವರು ಬಂದುಹೋದ ಅರಣ್ಯ ಪ್ರದೇಶವನ್ನು ದಂಡಕಾರಣ್ಯ ಎಂದೂ ಕರೆಯುತ್ತಾರೆ. ಸ್ಥಳದಲ್ಲಿ ಸೀತಾ-ರಾಮ-ಲಕ್ಷ್ಮಣ ಮತ್ತು ಆಂಜನೇಯಸ್ವಾಮಿಯ ಶಿಲ್ಪಗಳಿವೆ.
ಇಂಥ ಪವಿತ್ರಾ ಸ್ಥಳದಲ್ಲಿರುವ ದೇವಸ್ಥಾನಕ್ಕೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರೂ ಸೇರಿದಂತೆ ಮಕ್ಕಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು.ಪಾದಯಾತ್ರೆಯಲ್ಲಿ ವಿ.ಎಚ್.ಪಿ ತಾಲೂಕು ಅಧ್ಯಕ್ಷ ಕಾಳಿಂಗರಾಜ, ಜಿ.ಪಂ. ಮಾಜಿ ಸದಸ್ಯ ಪಾಣಿರಾಜಪ್ಪ, ಪುರಸಭಾ ಸದಸ್ಯ ಮಧುರಾಯ ಜಿ. ಶೇಟ್, ಮುಖಂಡರಾದ ಡಾ. ಎಚ್.ಇ. ಜ್ಞಾನೇಶ್, ನಾಗರಾಜ ಗುತ್ತಿ, ದೀಪಕ್ ದೊಂಗಡೇಕರ್, ಆನಂದ್, ಅನಿಲ್, ಗಿರೀಶ್, ಪ್ರಕಾಶ ಬಾಪಟ್, ದಿನಕರ ಭಟ್ ಭಾವೆ, ರಾಜು ದಾಮ್ಲೆ, ಯುವ ಬ್ರಿಗೇಡ್‌ನ ಮಹೇಶ್ ಖಾರ್ವಿ, ರಂಗನಾಥ ಮೊಗವೀರ್ ಮೊದಲಾದವರಿದ್ದರು.
- - - -22ಕೆಪಿಸೊರಬ01:ಸೊರಬ ಪಟ್ಟಣದ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿರುವ ಕುಪ್ಪೆ ಗ್ರಾಮದ ಶ್ರೀ ಸೀತಾರಾಮಲಕ್ಷ್ಮಣ ಸನ್ನಿಧಿಗೆ ಪಾದಯಾತ್ರೆ ನಡೆಸಿದರು.