ದಾಂಡೇಲಿ: ಪ್ರತಿವರ್ಷದಂತೆ ಈ ವರ್ಷವೂ ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವವು ಶನಿವಾರ ಸಂಭ್ರಮ ಹಾಗೂ ಆಕರ್ಷಕವಾಗಿ ಸಂಪನ್ನಗೊಂಡಿತು.ಸಂಜೆ ೭.೩೦ರಿಂದ ೯ ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ೫೦ ಅಡಿ ಎತ್ತರದ ರಾವಣನ ಮೂರ್ತಿ ೪೬ ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥರ ಮೂರ್ತಿಗಳನ್ನು ಸಹಸ್ರಾರು ಜನರ ಸಮಾಗಮದೊಂದಿಗೆ ಸುಡಲಾಯಿತು. ಈ ಮೂರ್ತಿಗಳಿಗೆ ಆಗ್ನಿಸ್ಪರ್ಶ ಮಾಡುವ ಮೊದಲು ಕಾರ್ಖಾನೆಯವರಿಂದ ಸುಮಾರು ಒಂದು ತಾಸು ಎರಡು ತಂಡಗಳಿಂದ ಅತ್ಯಾಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ೫೦ ಸಾವಿರ ಜನ ಭಾಗವಹಿಸಿದ್ದರು.
ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಸ್ವಾಗತಿಸಿದರು. ರಾಘವೇಂದ್ರ ಜೆ.ಆರ್. ವಂದಿಸಿದರು. ಪಾರೀಕ ಮತ್ತು ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಗೋಕರ್ಣ: ಇಲ್ಲಿನ ಭದ್ರಕಾಳಿ ಕಾಲೇಜಿನ ಬೃಹತ್ ಮೈದಾನದಲ್ಲಿ ಎಂಟು ದಿನಗಳ ಕಾಲ ನಡೆದ ಗುಜರಾತಿನ ಖ್ಯಾತ ಪ್ರವಚನಕಾರ ಮುರಾರಿ ಬಾಪುರವರಿಂದ ನಡೆಯುತ್ತಿದ್ದ ರಾಮಕಥಾ ಮಾಲಿಕೆ ಭಾನುವಾರ ಸಂಪನ್ನಗೊಂಡಿತು.ಅ. ೫ರಿಂದ ಪ್ರತಿದಿನ ಮುಂಜಾನೆ ೧೦ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ನಡೆದ ತುಳಸಿ ರಾಮಾಯಣ ಕಥಾಮಾಲಿಕೆಯಲ್ಲಿ ವಿವಿಧ ದೃಷ್ಟಾಂತದ ಮೂಲಕ ಮನೋಜ್ಞವಾಗಿ ಮುರಾರಿ ಬಾಪು ವಿವರಿಸಿದರು.ಪ್ರತಿದಿನ ಸಂಜೆ ಕುಡ್ಲೆ ಕಡಲತೀರದ ವಿಹಂಗಮ ನೋಟದ ನಿರಾಮಯ ರೆಸಾರ್ಟನ ತೆರದ ವೇದಿಕೆಯಲ್ಲಿ ಶಿಷ್ಯ ವೃಂದದಿಂದ ಭಕ್ತಿ ನೃತ್ಯ ಬಹು ಆಕರ್ಷಕವಾಗಿ ಮೂಡಿ ಬಂತು.
ಈ ಭಾಗದ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಈ ಊಟದ ರುಚಿ ಸವಿದರು. ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಈ ವಿಶೇಷ ಪ್ರಸಾದ ರೂಪದ ಉಚಿತ ಭೋಜನ ನೀಡಿದ್ದು ಮತ್ತೊಂದು ವಿಶೇಷವಾಗಿತ್ತು. ಇತ್ತೀಚಿನ ದಿನದಲ್ಲಿ ಪುಣ್ಯಕ್ಷೇತ್ರದಲ್ಲಿ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮವಾಗಿರುವುದು ಇದೇ ಮೊದಲನೆಯದಾಗಿದೆ.ಹೆಲಿಕ್ಯಾಪ್ಟರ್‌ನಲ್ಲಿ ತೆರಳಿದ ಬಾಪು: ಬಾಪು ಅವರಿಗಾಗಿ ಇಲ್ಲಿನ ಗೋಗರ್ಭದ ಕ್ರೀಡಾಂಗಣದಲ್ಲಿ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಹುಬ್ಬಳಿಯಿಂದ ಇಲ್ಲಿಗೆ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದರು. ಅದರಂತೆ ಭಾನುವಾರ ಮಧ್ಯಾಹ್ನ ಸಹ ಹೆಲಿಕ್ಯಾಪ್ಟರ್ ಮೂಲಕ ವಾಪಸ್ ತೆರಳಿದರು. ಇಲ್ಲಿ ಹೆಲಿಕ್ಯಾಪ್ಟರ್ ಬರುವದನ್ನು ನೊಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.