- ಚನ್ನಪಟ್ಟಣ ಬೊಂಬೆ, ಕೆಂಪೇಗೌಡ, ಶ್ರೀ ಕ್ಷೇತ್ರ ಕಬ್ಬಾಳಮ್ಮ - ರೇಷ್ಮೆನಗರಿಯ ಕಲೆ ಸಂಸ್ಕೃತಿಯ ಶ್ರೀಮಂತಿಕೆ ಅನಾವರಣ -ಎಂ.ಅಫ್ರೋಜ್ ಖಾನ್ ಕನ್ನಡಪ್ರಭ ವಾರ್ತೆ ರಾಮನಗರ ರೇಷ್ಮೆನಗರಿಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ರಾಮನಗರ ಜಿಲ್ಲೆಯಿಂದ ಪ್ರದರ್ಶನಗೊಳ್ಳಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಜಂಬುಸವಾರಿ ಎಷ್ಟು ಚಿತ್ತಾಕರ್ಷವೋ, ಅದರಲ್ಲಿ ಪಾಲ್ಗೊಳ್ಳಲಿರುವ ಸ್ತಬ್ಧಚಿತ್ರಗಳೂ ಸಹ ಅಷ್ಟೇ ನಯನ ಮನೋಹರ. ದಸರಾ ಮೆರವಣಿಗೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಅದರಂತೆ ರಾಮನಗರ ಜಿಲ್ಲೆಯ ಕೀರ್ತಿಯನ್ನು ಸಾರುವ ವಿಶಿಷ್ಟ ಸ್ತಬ್ಧಚಿತ್ರ ಪ್ರತಿನಿಸುತ್ತಿದೆ. ಅಕ್ಟೋಬರ್ 24ರಂದು ವಿಜಯದಶಮಿಯಂದು ಮೈಸೂರಿನಲ್ಲಿ ನಡೆಯಲಿರುವ ದಸರೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ದಸರೆ ಅಂಗವಾಗಿ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಲಿದೆ. ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ರಾಜ್ಯದ ಎಲ್ಲಾ ಜಿಲ್ಲೆಗಳು ತಮ್ಮ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಲಿವೆ. ಈ ನಿಟ್ಟಿನಲ್ಲಿ ರೇಷ್ಮೆನಗರಿಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರವನ್ನು ದಸರಾ ಮೆರವಣಿಗೆಗೆ ಕಳುಹಿಸಿಕೊಡಲು ಜಿಲ್ಲಾ ಪಂಚಾಯಿತಿ ಕ್ರಮಕೈಗೊಂಡಿದೆ. ರಾಮನಗರ ಜಿಲ್ಲೆ ನಾಡಪ್ರಭು ಕೆಂಪೇಗೌಡರ ತವರೂರು, ಅಪರೂಪದ ರಣಹದ್ದು, ಸಾಂಸ್ಕೃತಿಕ ಕಲೆ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಹೊಂದಿರುವ ತಾಣ ವಾಗಿದ್ದು, ಇದರ ಸಮಗ್ರ ಚಿತ್ರಣವನ್ನು ಬಿಂಬಿಸುವಂತೆ ಸ್ತಬ್ಧಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ವೈಭವ ಅನಾವರಣ: ಈ ಸ್ತಬ್ಧಚಿತ್ರದಲ್ಲಿ ಚನ್ನಪಟ್ಟಣದ ಬೊಂಬೆ ಪ್ರಮುಖ ಆಕರ್ಷಣೆಯಾಗಿರಲಿದೆ. ಸ್ತಬ್ಧಚಿತ್ರದ ಮುಂಭಾಗದಲ್ಲಿಯೇ ವಿಶ್ವ ಖ್ಯಾತಿ ಪಡೆದುಕೊಂಡಿರುವ ಚನ್ನಪಟ್ಟಣದ ಬೊಂಬೆ ಸ್ಥಾನ ಪಡೆದುಕೊಂಡಿದ್ದರೆ, ನಂತರ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆ , ಅದರ ಹಿಂಬದಿಯಲ್ಲಿ ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಸ್ಥಾನದ ಪ್ರತಿರೂಪ ಕಂಗೊಳಿಸಲಿದೆ. ಸ್ತಬ್ಧಚಿತ್ರದ ಹಿಂಬದಿಯಲ್ಲಿ ಅಳಿವಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದಿನ ಬೃಹತ್ ಪ್ರತಿರೂಪ ಇರಲಿದೆ. ಜೊತೆಗೆ ಎಡ ಮತ್ತು ಬಲ ಬದಿಯಲ್ಲಿ ಮಾಗಡಿಯ ಕೆಂಪಾ ಪುರದಲ್ಲಿರುವ ಕೆಂಪೇಗೌಡರ ಸಮಾ, ರಾಮನಗರದ ಮಾವು, ರೇಷ್ಮೆ, ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, ರಾಮದೇವರ ಬೆಟ್ಟ ಹಾಗೂ ಮಾಗಡಿಯ ರಂಗನಾಥ ಸ್ವಾಮಿ ದೇವಾಲಯಗಳ ಪ್ರತಿಬಿಂಬ ಕಂಗೊಳಿಸುವುದನ್ನು ಅನಾವರಗೊಳಿಸಲಾಗುತ್ತಿದೆ. ಸ್ತಬ್ಧ ಚಿತ್ರ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯು ನಿರ್ಮಿತಿ ಕೇಂದ್ರವನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಿದ್ದು, ಸ್ತಬ್ಧಚಿತ್ರಕ್ಕೆ ನಿರ್ಮಾಣ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆ ಅಥವಾ ಕಲಾವಿದರಿಂದ ಕೊಟೇಷನ್ ಸ್ವೀಕರಿಸಿ ಗುತ್ತಿಗೆ ನೀಡಲಾಗುತ್ತದೆ. ಶೀಘ್ರವೇ ಕಲಾವಿದರ ಆಯ್ಕೆ ಅಂತಿಮಗೊಳಿಸಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಈ ಸ್ತಬ್ಧ ಚಿತ್ರದಲ್ಲಿ ಫೈಬರ್, ಪ್ಲೇ ಹುಡ್, ಸ್ಟೀಲ್ ಹಾಗೂ ಥರ್ಮಕೋಲ್ ನಿಂದ ಮಾಡಿದ ಬೊಂಬೆಗಳನ್ನು ನಿರ್ಮಿಸಲಾಗುತ್ತದೆ. ಮೈಸೂರು ದಸರಾ ಮೆರವಣಿಗೆಯಲ್ಲಿ ಚನ್ನಪಟ್ಟಣ ಬೊಂಬೆಗಳ ಶ್ರೀಮಂತಿಕೆ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿರೂಪವನ್ನು ಬಿಂಬಿಸಲಾಗುತ್ತಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬೊಂಬೆಗಳು ಸಾಕಷ್ಟು ಖ್ಯಾತಿಯನ್ನು ಪಡೆದಿವೆ. ಇದೊಂದು ಅತ್ಯುತ್ತಮ ಹಾಗೂ ಚಿತ್ತಾಕರ್ಷಕ ಸ್ತಬ್ಧಚಿತ್ರವಾಗಿದ್ದು, ಬಹುಮಾನ ಗಳಿಸುವ ವಿಶ್ವಾಸವಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು. ಬಾಕ್ಸ್ ................ ದಸರಾದಲ್ಲಿ ಸ್ಟಾಲ್ ನಿರ್ಮಾಣ ಮೈಸೂರು ದಸರಾದ ಪ್ರದರ್ಶನ ಮೇಳದಲ್ಲಿ ಒಂದು ಸ್ಟಾಲ್ ಸಹ ತೆರಯಲಾಗುತ್ತಿದೆ. ಇದಕ್ಕಾಗಿ ಇಲ್ಲಿ ಈಗಾಗಲೇ 15*52 ಅಳತೆಯ ಸ್ಥಳವೂ ನಿಗದಿಯಾಗಿದೆ. ಇಲ್ಲಿಯೂ ಸಹ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಪ್ರದರ್ಶನ ಮಾಡುವ ಜತೆಗೆ, ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳು, ಜಿಪಂನಿಂದ ಕೈಗೊಂಡಿರುವ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಪ್ರದರ್ಶನ ಮಾಡಲಾಗುತ್ತದೆ. 7ಕೆಆರ್ ಎಂಎನ್ 10.ಜೆಪಿಜಿ ಮೈಸೂರು ದಸರಾ ಮೆರವಣಿಗೆಯಲ್ಲಿ ರಾಮನಗರ ಜಿಲ್ಲೆಯನ್ನು ಪ್ರತಿನಿಸಲಿರುವ ಸ್ತಬ್ಧಚಿತ್ರ.