ಕನ್ನಡಪ್ರಭ ವಾರ್ತೆ ರಾಮನಗರ
ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ರಾಮನಗರ ರೋಟರಿ ಹೆಮ್ಮೆಯ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಜಿಲ್ಲಾ ರಾಜ್ಯಪಾಲರಾದ ಸತೀಶ್ ಮಾಧವನ್ ಶ್ಲಾಘಿಸಿದರು.ನಗರದ ರಾಯಲ್ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ರೋಟರಿ ರಾಮನಗರ ಡಿಸ್ಟ್ರಿಕ್ಟ್ 3191 ಜಿಲ್ಲಾ ರಾಜ್ಯಪಾಲರು ಅಧಿಕೃತ ಭೇಟಿ ನೀಡಿ ವಾರ್ಷಿಕ ಕಾರ್ಯ ಚಟುವಟಿಕೆ ಬಗ್ಗೆ ಪರಿಶೀಲನೆ ನಡೆಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಉತ್ತಮ ಉದ್ದೇಶ ಹಾಗೂ ಗುರಿಯೊಂದಿಗೆ ಕಾರ್ಯ ಯೋಜನೆ ರೂಪಿಸಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅನ್ಯ ಸಂಸ್ಥೆಗಳಲ್ಲಿ ಗೊಂದಲ, ಸಮಯಕ್ಕೆ ಸರಿಯಾಗಿ ಫೀಸ್ ಕಟ್ಟುವುದಿಲ್ಲ ಎಂಬ ದೂರುಗಳು ಕೇಳಿಬರುತ್ತವೆ. ಆದರೆ ರಾಮನಗರ ರೋಟರಿ ಸಂಸ್ಥೆ ಉತ್ತಮವಾಗಿ ನಡೆದುಬರುತ್ತಿದೆ ಎಂದರು.ರೋಟರಿ ಸದಸ್ಯರು ತ್ಯಾಗ ಮನೋಭಾವನೆ ಮೂಲಕ ಕಾರ್ಯಯೋಜನೆ ರೂಪಿಸಿ, ಇತರರಿಗೆ ಸಹಾಯ ನೀಡುವ ಉದ್ದೇಶದೊಂದಿಗೆ ಸೇವೆ ಸಲ್ಲಿಸುತ್ತಾರೆ. ಗ್ರಾಮೀಣ ಪ್ರದೇಶದ ಅಸಹಾಯಕರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಎಲ್ಲೆಡೆ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಸಾರ್ವಜನಿಕರಿಗೆ, ನಿರ್ಗತಿಕರಿಗೆ ಅನುಕೂಲಕ್ಕಾಗಿ ಮಾಡಿರುವ ಸೇವೆ ಹಾಗೂ ಹಲವು ಕಾರ್ಯ ಯೋಜನೆಗಳ ಸಾಧನೆಗಳ ಬಗ್ಗೆ ಸತೀಶ್ ಮಾಧವನ್ ಶ್ಲಾಘನೆ ವ್ಯಕ್ತಪಡಿಸಿದರು.
ರೋಟರಿ ಅಧ್ಯಕ್ಷ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಾನಪದ ಕ್ಷೇತ್ರದಿಂದ ಪಾರ್ಥಸಾರಥಿ, ಮಾಧ್ಯಮ ಕ್ಷೇತ್ರದಿಂದ ಕ್ಯಾಮೆರಾ ಮ್ಯಾನ್ ಶಶಿ ಕುಮಾರ್, ಕಲಾಪ್ರಿಯ ಪತ್ರಿಕೆ ಸಂಪಾದಕಿ ಸುಧಾರಾಣಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ವ್ಹೀಲ್ ಚೇರ್ ವಿತರಣೆ ಮಾಡಲಾಯಿತು, ಹಾಗೂ ರೋಟರಿ ಹೆಮ್ಮೆಯ ಅರ್ಕಾವತಿ ಪತ್ರಿಕೆಯನ್ನು ವೇದಿಕೆಯಲ್ಲಿ ಇದ್ದ ಗಣ್ಯರು ಬಿಡುಗಡೆ ಮಾಡಿದರು.
ರೋಟರಿ ಸಹಾಯಕ ರಾಜ್ಯಪಾಲ ವಿಜಯ್, ವಲಯ ಪ್ರಮುಖರಾದ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಆರ್. ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ, ವಲಯ ಕಾರ್ಯದರ್ಶಿ ಗವಿರಾಜು, ಚೇರ್ಮನ್ ಅಲ್ತಾಫ್ ಅಹಮದ್, ಕಾರ್ಯದರ್ಶಿ ನಂದನ್ ರಾವ್, ನಿಕಟಪೂರ್ವ ಅಧ್ಯಕ್ಷ ಕೆ. ಎಸ್. ಕಾಂತರಾಜು, ನಿಯೋಜಿತ ಅಧ್ಯಕ್ಷೆ ಸೌಮ್ಯ ಕುಮಾರಸ್ವಾಮಿ ಉಪಸ್ಥಿತರಿದ್ದರು.