ಕನ್ನಡಪ್ರಭ ವಾರ್ತೆ ಕಲಬುರಗಿ
ತೊಗರಿ ಕಣಜ ಕಲಬುರಗಿಯಲ್ಲಿ ಸೋಮವಾರದ ಇಡೀ ದಿನ ರಾಮಮಯವಾಗಿತ್ತು. ಎಲ್ಲೆಡೆ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಿಂದಲೇ ರಾಮನ ಸ್ಮರಣೆ ಶುರುವಾಗಿತ್ತು.ನಗರ ಹಾಗೂ ಜಿಲ್ಲೆಯ ಪ್ರತಿ ಮನೆ, ಮಂದಿರಗಳಲ್ಲೆಲ್ಲಾ ರಾಮ ಭಜನೆ, ದೀಪಾರಾಧನೆ, ಹೋಮ-ಹವನ, ವೇದಮಂತ್ರಗಳ ಘೋಷಣೆ, ಮಂದಿರಗಳ ಸ್ವಚ್ಚತೆ, ಪೂಜೆ-ಪುನಸ್ಕಾರ ನಡೆದವು. ಉತ್ಸಾಹಿ ಹಿಂದೂ ಸೇನೆ ಕಾರ್ಯಕರ್ತರು ರಾಮನ ಆಳೆತ್ತರದ ಕಟೌಟ್‌ಗೆ ಕ್ಷೀರಾಭಷೇಕ ಮಾಡಿ ಸಂಭ್ರಮಿಸಿದರು.
ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಹೊತ್ತಲ್ಲೇ ಸರಿಯಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯಲ್ಲಿ ಇಂತಹ ಪವಿತ್ರ ನೋಟಗಳು, ಮಂಗಳಕರ ಸನ್ನಿವೇಶಗಳು ಕಂಡು ಬಂದವು. ಇವೆಲ್ಲವುಗಳಿಂದಾಗಿ ಸೋಮವಾರದ ಇಡೀ ದಿನ ಜಿಲ್ಲಾದ್ಯಂತ ರಾಮನಾಮ ಅನುಸರಣಿಸಿತ್ತು.ಅಯೋಧ್ಯೆಯಲ್ಲಿ ಬಾಲ ರಾಮ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಪರಮ ಮಂಗಳಕರ ಸನ್ನಿವೇಶಕ್ಕೆ ದೇಶದ ಲಕ್ಷಾಂತರ ಜನ ಸಾಕ್ಷಿಯಾಗುವ ಹೊತ್ತಿಗೇ ಕಲಬುರಗಿ ಜೇವರ್ಗಿ ರಸ್ತೆಯಲ್ಲಿರುವ ಪ್ರಭು ಶ್ರೀರಾಮ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ರಾಮನಾಮ ತಾರಕ ಹೋಮ:ಅಯೋಧ್ಯೆಯಲ್ಲಿ ರಾಮನ ಅವತಾರವಾಗುತ್ತಿದೆ ಎಂದು ರಾಮ ಮಂತ್ರಗಳನ್ನು ಹೇಳುತ್ತ ಸೇರಿದ್ದ ನೂರಾರು ಭಕ್ತರು, ಸುಮಂಗಲೀಯರು ಶ್ರೀರಾಮ ಮಂದಿರದಲ್ಲಿ ನಡೆದ ಶ್ರೀರಾಮ ಸ್ತೋತ್ರ ಕವಚ ಹೋಮ ಮತ್ತು ರಾಮನಾಮ ತಾರಕ ಹೋಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಹನುಮಾನ್ ಮಂದಿರದಲ್ಲಿ ದೀಪೋತ್ಸವ:ಕರುಣೇಶ್ವರ ನಗರದ ಶ್ರೀ ಜೈವೀರ ಹನುಮಾನ್ ಮಂದಿರದಲ್ಲಿ ಅಯೋಧ್ಯೆಯಲ್ಲಿನ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮವನ್ನು ಪರದೆಯಲ್ಲಿ ಪ್ರದರ್ಶನ ಮಾಡಲಾಯ್ತು. ಹನುಮಂತ ದೇವರಿಗೆ ಪಂಚಾಮೃತ ಅಭಿಷೇಕ ಎಲೆಕಟ್ಟು ಪೂಜೆ ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಮಂಡಳಿ ಸದಸ್ಯರಿಂದ ಭಜನೆ, ಸಹಸ್ರ ದೀಪೋತ್ಸವ ನಡೆಯಿತು.
ರಾಮನಿಗೆ ಕ್ಷೀರಾಭಿಷೇಕ:ಆಳಂದ ರಸ್ತೆಯಲ್ಲಿರುವ ಶೆಟ್ಟಿ ಥೇಟರ್ ರಸ್ತೆಯಲ್ಲಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ರಾಮನ ಭಾರಿ ಗಾತ್ರದ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಸೇನೆ ಮುಖಂಡರಾದ ಲಕ್ಷ್ಮೀಕಾಂತ ಸ್ವಾದಿ, ಸಿದ್ದು ಪಾಟೀಲ್ ಇತರರಿದ್ದರು.
ಸೋಮವಂಶ ಕ್ಷತ್ರಿಯ ಸಮಾಜದವರ ಸಂಭ್ರಮ:ಷಹಾಬಜಾರ್‌ನಲ್ಲಿರುವ ರಘುಕುಲ ತಿಲಕ ರಾಮದೇವರ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ರಾಮ ಮಂದಿರದಲ್ಲಿಯೂ ವಿಶೇಷ ಪೂಜಾದಿಗಳನ್ನು ನಡೆಸಲಾಯ್ತು. ರಾಮದೇವರ ಪ್ರಾಣಪ್ರತಿಷ್ಠಾಪನೆ ಸವಿ ನೆನಪಿಗಾಗಿ ಇಲ್ಲಿ ಸೇರಿದ್ದ ಭಕ್ತರು ರಾಮ ಭಜನೆ ಮಾಡಿ ಸಂತೋಷಪಟ್ಟರು. ಬಂದವರಿಗೆಲ್ಲರಿಗೂ ಪ್ರಸಾದ ವಿತರಿಸಲಾಯ್ತು.
ಬೀದಿಗಳೆಲ್ಲ ಶಿಂಗಾರ:ಹಳೆ ಕಲಬುರಗಿ ಬ್ರಹ್ಮಪೂರ, ಷಹಾಬಜಾರ್, ನ್ಯೂ ರಾಘವೇಂದ್ರ ಕಾಲೋನಿ, ಲಾಲ್ ಗೇರಿ ಕ್ರಾಸ್, ಸುಭಾಸ ಚೌಕ್ ಸೇರಿ ಅನೇಕ ಬಡಾವಣೆಗಳಲ್ಲಿ ರಸ್ತೆಗಳಲ್ಲಿ ರಾಮ, ಹನುಮಂತ ದೇವರರನ್ನ ರಗವಲ್ಲಿಗಳಲ್ಲಿ ರಚಿಸಲಾಗಿತ್ತಲ್ಲದೆ, ರಸ್ತೆಗಳಲ್ಲೆಲ್ಲಾ ತಳಿರು ಹಾಕಿ ತೋರಣ ಕಂಟ್ಟಿ, ಕೇಸರಿಮಯವಾಗಿಸಿದ್ದರು.
ಅನೇಕ ಬಡಾವಣೆಗಳಲ್ಲಿ ಯುವಕರು ಪಟಾಕಿ ಸಿಡಿಸಿ ವಿಜಯೋತ್ಸವ ರೂಪದಲ್ಲಿ ಆಚರಿಸಿ ಖುಷಿ ಪಟ್ಟರು. ಷಹಾಬಾಜರ್‌ನಲ್ಲಿ ಯುವಕರ ಗುಂಪುಗಳು ಸಂಭ್ರಮದಲ್ಲಿ ಮುಳುಗಿದ್ದರೆ, ಸುಮಂಗಲಿಯರು ಗುಂಪಾಗಿ ರಾಮ ದೇವರ ಮುಂದೆ ಕುಳಿತು ಭಜನೆ ಹಾಡಿದರು.ರಾಮ ಭಕ್ತರಂತೂ ಬ್ರಹ್ಮಪೂರ, ನ್ಯೂ ರಾಘವೇಂದ್ರ ಬಡಾವಣೆಯಲ್ಲಿ ಮನೆಗಳಂಗಳ, ಮೊಗಸಾಲೆಗಳಲ್ಲೆಲ್ಲಾ ಬಣ್ಣದ ರಂಗವಲ್ಲಿ ಬಳಸಿ ರಾಮದೇವರ ಸುಂದರ ಹಾಗೂ ಆಳೆತ್ತರದ ಚಿತ್ರ ಬಿಡಿಸಿ ಪೂಜಿಸಿದ್ದ ನೋಟಗಳು ಕಂಡವು. ಅನೇಕರು ತಮ್ಮ ಪುಟಾಣಿಗಳಿಗೆ ರಾಮನ ವೇಷ ಪೋಷಾಕು ತೊಡಿಸಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಸಂಭ್ರಮ ಸವಿದರು.
ನಗರದ ಕಾಕಡೆ ಚೌಕ್‍ನಲ್ಲಿ 9 ಗಂಟೆಗೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ್ ಸೇವಾ ಸಮಿತಿ ಪ್ರತಾಪ್ ಕಾಕಡೆ ನೇತೃತ್ವದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ, ಹೋಮ ಹವನ ಹಾಗೂ ಮೂರ್ತಿ ಪೂಜೆ ನೆರವೇರಿಸಲಾಯ್ತು. ಮುತ್ಯಾನ್ ಬಬಲಾದ್‍ನ ಗುರುಪಾದಲಿಂಗ್ ಮಹಾ ಶಿವಯೋಗಿಗಳು, ನಿರಗುಡಿಯ ಮಲ್ಲಿನಾಥ್ ಮಹಾರಾಜರು ಇದ್ದರು. ಹಣಮಂತ್ ಪೂಜಾರಿ, ರಾಜಶೇಖರ್ ಬಿ.ರಾಜೇಶ್ವರ್ ಡೊಂಗರಗಾಂವ್, ಪ್ರಭಾಕರ್ ಜಾಧವ್, ಚನ್ನಪ್ಪ ವರನಾಳ್, ನಿಜಲಿಂಗಪ್ಪಾ ಟೆಂಗಳಿ, ರಾಜು ಖೇರೋಜಿ, ರಾಕೇಶ್ ಕಪನೂರ್, ರವಿಕುಮಾರ್ ಸುಂಕದ್, ಜ್ಯೋತಿಭಾ ಎಸ್. ಜಾಧವ್, ಸಂಗಮೇಶ್ ಪಾಟೀಲ್, ಗುಂಡೂರಾವ್ ಪಟೀಲ್, ರವಿ ರಾಠೋಡ್, ಆನಂದ್ ಚವ್ಹಾಣ್ ಇದ್ದರು.