ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಪದವೀಧರ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರಿಗೆ ಹೊಸಕೋಟೆ ಮತಕ್ಷೇತ್ರದಿಂದ ಕನಿಷ್ಠ ಶೇಕಡ 80ರಷ್ಟು ಮತ ಕೊಡಿಸುವುದಾಗಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.ಮಂಗಳವಾರ ಹೊಸಕೋಟೆ ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಹೊಸಕೋಟೆ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದವೀಧರರ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಸಕೋಟೆ ಮತಕ್ಷೇತ್ರದಲ್ಲಿ ಶೇ.86ರಷ್ಟು ಮತದಾನವಾಗಿದೆ. ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನವಾದ ಕ್ಷೇತ್ರ. ಈ ಚುನಾವಣೆಯಲ್ಲಿಗೂ ಅದೇ ರೀತಿ ಚುನಾವಣೆ ನಡೆಸಿ, ಮತದಾರರ ಮನೆ ಮನೆಗೆ ತೆರಳಿ ರಾಮೋಜಿಗೌಡ ಅವರ ಕಾರ್ಯ ವೈಖರಿ ಸೇರಿದಂತೆ ಅವರ ವಿವಿಧ ಕಾರ್ಯಗಳನ್ನು ಮನವರಿಕೆ ಮಾಡಿಕೊಟ್ಟು ಮತದಾರರ ಮನವೊಲಿಸಬೆಕು ಎಂದು ಹೇಳಿದರು.ಕೋವಿಡ್ ಕಾಲಘಟ್ಟದಲ್ಲಿ ಸಹಸ್ರಾರು ಜನರಿಗೆ ಔಷಧಿ, ಆಹಾರ ಕಿಟ್ ವಿತರಣೆ, ಶಾಲೆಗಳ ಜೀರ್ಣೋದ್ಧಾರ, ಸಾಮೂಹಿಕ ವಿವಾಹ, ದೇಗುಲಗಳ ನಿರ್ಮಾಣ, ಆರೋಗ್ಯ ಮೇಳ ಮಾಡಿದ್ದಾರೆ. ಬೃಹತ್ ಉದ್ಯೋಗ ಮೇಳ ಆಯೋಜಿಸಿ 12 ಸಾವಿರಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಹೊಸಕೋಟೆಯಲ್ಲಿ ಉದ್ಯೋಗ ಮೇಳ ನಡೆಸಲಿದ್ದಾರೆ. ಪದವೀಧರರಿಗೆ ಕೆಲಸ ಕೊಡಿಸಲಿದ್ದಾರೆ ಎಂದರು.
ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮಾತನಾಡಿ, ಪದವೀಧರರು ಮತದಾನ ಮಾಡುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಅನುಕ್ರಮ ಸಂಖ್ಯೆ 2 ರಾಮೋಜಿಗೌಡರ ಹೆಸರು ಮುಂದೆ 1 ಎಂದು ಬರೆದು ಪ್ರಥಮ ಪ್ರಾಶಸ್ತ್ಯದ ಮತದಾನ ನೀಡಬೇಕೆಂದು ಮನವಿ ಮಾಡಿದರು. ಮುಂಬರುವ ದಿನಗಳಲ್ಲಿ ಬೆಂಗಳೂರು ಪದವೀಧರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 36 ವಿಧಾನ ಸಭಾ ಮತಕ್ಷೇತ್ರದಲ್ಲಿಯೂ ಉದ್ಯೋಗ ಮೇಳ, ಆರೋಗ್ಯ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.