ಬಳ್ಳಾರಿಯಲ್ಲಿ ಸಂಭ್ರಮದಿಂದ ರಂಜಾನ್‌ ಆಚರಣೆ

KannadaprabhaNewsNetwork |  
Published : Mar 22, 2026, 02:00 AM IST
ರಂಜಾನ್ ಹಿನ್ನೆಲೆ ಬಳ್ಳಾರಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ನಗರ ಸೇರಿದಂತೆ ಜಿಲ್ಲಾದ್ಯಂತ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಶನಿವಾರ ಆಚರಿಸಲಾಯಿತು.

ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಪರಸ್ಪರ ಹಬ್ಬದ ಶುಭಾಶಯ ವಿನಿಮಯ

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರ ಸೇರಿದಂತೆ ಜಿಲ್ಲಾದ್ಯಂತ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಶನಿವಾರ ಆಚರಿಸಲಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನ, ಜುಮ್ಮಾ ಮಸೀದಿ ಸೇರಿದಂತೆ ಅನೇಕ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ ಅಂಗವಾಗಿ ಮನೆ ಮನೆಗಳಲ್ಲಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಬಂಧು-ಮಿತ್ರರಿಗೆ ಹಂಚಿಕೊಂಡರು. ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ದಾನಧರ್ಮಕ್ಕೂ ವಿಶೇಷ ಮಹತ್ವ ನೀಡಲಾಯಿತು. ಮುಸ್ಲಿಮರು ಹೊಸ ಬಟ್ಟೆ ತೊಟ್ಟು ಹಬ್ಬದ ಸಡಗರದಲ್ಲಿ ಸಂಭ್ರಮಿಸಿದರು.

ಇಲ್ಲಿನ ಈದ್ಗಾ ಮೈದಾನದಲ್ಲಿ ಜರುಗಿದ ಪ್ರಾರ್ಥನೆಯಲ್ಲಿ ನಗರದ ಮುಸ್ಲಿಮರು, ಶಾಸಕ ನಾರಾ ಭರತ್ ರೆಡ್ಡಿ, ಸಂಸದ ಈ. ತುಕಾರಾಂ, ಮೇಯರ್ ಪಿ. ಗಾದೆಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಮುಸ್ಲಿಂ ಧರ್ಮಗುರು ಸಿದ್ಧಿಕಿ ಅವರು ಹಬ್ಬದ ಮಹತ್ವ ಕುರಿತು ತಿಳಿಸಿಕೊಟ್ಟರು. ರಂಜಾನ್ ಹಬ್ಬವು ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಆತ್ಮಶುದ್ಧಿ, ಮಾನವೀಯತೆ ಮತ್ತು ಸಹಾನುಭೂತಿಯ ಪಾಠವನ್ನು ಕಲಿಸುವ ಮಹತ್ವದ ಸಮಯವಾಗಿದೆ. ವ್ಯಕ್ತಿಯ ಒಳಗಿನ ಶಕ್ತಿಯನ್ನು ಅರಿತುಕೊಳ್ಳಲು ಮತ್ತು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಇದು ಸಹಾಯಕವಾಗಿದೆ. ರಂಜಾನ್ ವೇಳೆ ನಡೆಸುವ ಉಪವಾಸ(ರೋಜಾ) ಆಹಾರ ತ್ಯಾಗವಷ್ಟೇ ಅಲ್ಲ; ಮನಸ್ಸಿನ ಶುದ್ಧೀಕರಣ ಮತ್ತು ದೇವರ ಸಮೀಪತೆಗೆ ದಾರಿ ತೋರಿಸುವ ಒಂದು ಆಧ್ಯಾತ್ಮಿಕ ಸಾಧನೆ ಎಂದರು.

ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಸಂಸದ ಈ. ತುಕಾರಾಂ ಅವರು ಸುದ್ದಿಗಾರರ ಜತೆ ಮಾತನಾಡಿ, ಸೌಹಾರ್ದತೆಯ ಸಂಕೇತವಾದ ರಂಜಾನ್‌ನಲ್ಲಿ ಸಂತಸದಿಂದ ಎಲ್ಲರೂ ಪಾಲ್ಗೊಂಡಿದ್ದೇವೆ. ನಿಜವಾದ ಹೊಸ ವರ್ಷ ಯುಗಾದಿ, ರಂಜಾನ್‌ನಿಂದ ಆರಂಭವಾಗಿದೆ. ಪ್ರಕೃತಿಯೇ ಪೂರಕವಾಗಿ ಎಲ್ಲರೂ ಒಂದಾಗಿ ಬಾಳಬೇಕೆಂಬಂತೆ ಯುಗಾದಿ, ರಂಜಾನ್‌ ಹಬ್ಬಗಳು ಒಟ್ಟಿಗೆ ಬಂದಿವೆ. ಮಾನವ ಧರ್ಮ ಎತ್ತಿಹಿಡಿದು ಪ್ರೀತಿ, ಪ್ರೇಮದಿಂದ ಬಾಳಬೇಕಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಘಟಗಿ ಬಳಿ ಟ್ಯಾಂಕರ್‌ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್‌ ಸೋರಿಕೆ
ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಸಂಕಲ್ಪ