ಉಡುಪಿ: ಇಲ್ಲಿನ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು 14ನೇ ವರ್ಷದ ನಾಟಕೋತ್ಸವ ರಂಗಹಬ್ಬವನ್ನು ಫೆ. 22ರಿಂದ 28ರವರೆಗೆ ಉಡುಪಿಯ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.ಈ ಬಗ್ಗೆ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಹಾಗೂ ಗೌರವಾಧ್ಯಕ್ಷ ಎಂ.ಎಸ್. ಭಟ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಈ ಬಾರಿಯ ರಂಗಹಬ್ಬವನ್ನು ತುಳು ರಂಗಭೂಮಿ ಮತ್ತು ತುಳು ಚಲನಚಿತ್ರ ರಂಗದ ಹಿರಿಯ ರಂಗಕರ್ಮಿ ಡಾ. ಪಿ. ಸಂಜೀವ ದಂಡೆಕೇರಿ ಅವರು ನಾಟಕೋತ್ಸವವನ್ನು ಉದ್ಘಾಟಿಸುವರು. ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸುವರು.ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆ ಇರಲಿದೆ. ಯಕ್ಷಗುರು ಯು. ದುಗ್ಗಪ್ಪ ಅವರ ನೆನಪಿನಲ್ಲಿ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿ. ಕೃಷ್ಣ ಸ್ವಾಮಿ ಜೋಷಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
23 ರಾಜ್ಯ, 4 ರಾಷ್ಟ್ರೀಯ ಪ್ರಶಸ್ತಿಗಳ ಗರಿ: ‘ಸುಮನಸಾ ಕೊಡವೂರು ಸಂಘಟನೆ 2002ರಲ್ಲಿ ಆರಂಭಗೊಂಡಿದ್ದು, ಪ್ರತಿ ವರ್ಷ ಮೂರು ನಾಟಕಗಳನ್ನು ಸಿದ್ಧಪಡಿಸಿ 750ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. 23 ಬಾರಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ, 4 ಬಾರಿ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡ ಈ ಸಂಸ್ಥೆಗೆ ಲಭಿಸಿದೆ. ಕಳೆದ 13 ವರ್ಷಗಳಿಂದ ರಂಗಹಬ್ಬವನ್ನು ಸಂಘಟಿಸುತ್ತಾ ಬಂದಿದ್ದು, ರಾಷ್ಟ್ರೀಯ, ಪೌರಾಣಿಕ ನಾಟಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಿದೆ’ ಎಂದು ಸಂಘಟಕರು ಹೇಳಿದರು.