ಮುಜರಾಯಿ ಇಲಾಖೆಯ ಆಭರಣಗಳನ್ನು ಗಂಗಾವತಿ ಖಜಾನೆಗೆ ಶಿಪ್ಟ್ ಮಾಡಿರುವ ವಿಷಯ ಜಿಲ್ಲಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ
ಕನಕಗಿರಿ: ಕಳೆದ ಎರಡ್ಮೂರು ತಿಂಗಳಿಂದ ನಡೆಯುತ್ತಿರುವ ನಿರಂತರ ಕಳ್ಳತನ ಪ್ರಕರಣಗಳಿಗೆ ಅಧಿಕಾರಿಗಳು ಬೆಚ್ಚಿ ಬಿದ್ದಿರುವ ಕಾರಣ ಇಲ್ಲಿನ ಇತಿಹಾಸ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದಲ್ಲಿನ ಆಭರಣಗಳನ್ನು ಗಂಗಾವತಿಯ ಉಪ ಖಜಾನೆಗೆ ಸ್ಥಳಾಂತರಿಸಲಾಗಿದೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಕಳ್ಳತನ ಪ್ರಕರಣ ನಡೆಯುತ್ತಿದ್ದರಿಂದ ಜನರು ಆತಂಕಗೊಂಡಿದ್ದರು. ಕಳ್ಳರ ಕೈ ಚಳಕಕ್ಕೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದು, ದೇವಸ್ಥಾನದಲ್ಲಿ ಬಂಗಾರ, ಬೆಳ್ಳಿ ಆಭರಣ ಸುರಕ್ಷತೆಗಾಗಿ ಗಂಗಾವತಿಯ ಖಜಾನೆ ಕಚೇರಿಗೆ ಕಳುಹಿಸಿದ್ದು, ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಆದೇಶದನ್ವಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ, ತಹಸೀಲ್ದಾರರು ಆಗಿರುವ ವಿಶ್ವನಾಥ ಮುರುಡಿ, ದೇವಸ್ಥಾನದ ಅರ್ಚಕರು, ಪ್ರಮುಖರ ಸಮ್ಮುಖದಲ್ಲಿ ಇತ್ತೀಚಿಗೆ ತೂಕ ಮಾಡಿಸಿ ದೇವಸ್ಥಾನದಲ್ಲಿದ್ದ ಒಟ್ಟು ೭೬ ಕೆಜಿ ೮೦೫ ಗ್ರಾಂ ಬೆಳ್ಳಿ ಹಾಗೂ ೨೧೨೦ ಗ್ರಾಂ ೨೮೪ ಮಿಲೀ ಚಿನ್ನದ ಆಭರಣಗಳಿಗೆ ಹೆಚ್ಚಿನ ಭದ್ರತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಮಾ.5 ರವರೆಗೆ ಗಂಗಾವತಿಯ ಉಪ ಖಜಾನೆಯಲ್ಲಿರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಜನ, ಅಧಿಕಾರಿಗಳು ತಲ್ಲಣ: ಅಂಗಡಿ, ಮುಂಗಟ್ಟು ಕಳ್ಳತನವಾದಾಗ ಸಾರ್ವಜನಿಕರು ಭಯಭೀತರಾಗುವುದು ಸಹಜ. ಆದರೆ, ನಿರಂತರ ಕಳ್ಳತನ ಪ್ರಕರಣಗಳಿಗೆ ಅಧಿಕಾರಿಗಳು ಹೆದರಿಕೊಂಡಿದ್ದು, ಮುಜರಾಯಿ ಇಲಾಖೆಯ ಆಭರಣಗಳನ್ನು ಗಂಗಾವತಿ ಖಜಾನೆಗೆ ಶಿಪ್ಟ್ ಮಾಡಿರುವ ವಿಷಯ ಜಿಲ್ಲಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನಕಗಿರಿ ತಾಲೂಕಲ್ಲಿ ಕಳ್ಳರ ಕಾಟಕ್ಕೆ ಜನರು ಮತ್ತು ಅಧಿಕಾರಿಗಳು ತಲ್ಲಣಗೊಂಡಿದ್ದಾರೆ.
ದೇವಸ್ಥಾನದಲ್ಲಿನ ಆಭರಣಗಳನ್ನು ಭದ್ರತೆಯ ದೃಷ್ಟಿಯಿಂದ ಮೇಲಾಧಿಕಾರಿಗಳ ಆದೇಶದನ್ವಯ ಗಂಗಾವತಿಯ ಉಪ ಖಜಾನೆಗೆ ಸ್ಥಳಾಂತರಿಸಲಾಗಿದೆ. ದಿನ ನಿತ್ಯ ಬಳಕೆಯ ಆಭರಣಗಳು ದೇವಸ್ಥಾನದಲ್ಲಿವೆ ಎಂದು ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.