ಉಡುಪಿ: ರಂಗಶಿಕ್ಷಣ ಮಕ್ಕಳ ಜೀವನ ಪರಿವರ್ತನೆಗೆ ನಾಂದಿಯಾಗಲಿದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭಾಶಕ್ತಿಯನ್ನು ಹೊರ ತರುವುದೇ ಈ ರಂಗಶಿಕ್ಷಣದ ಉದ್ದೇಶವಾಗಿದೆ. ಈ ಉದ್ದೇಶ ಸಾಕಾರಗೊಳ್ಳುತ್ತಿದೆ. ಜಿಲ್ಲೆಯ 11 ಶಿಕ್ಷಣ ಸಂಸ್ಥೆಗಳ 250ಕ್ಕೂ ಅಧಿಕ ಮಕ್ಕಳು ರಂಗಶಿಕ್ಷಣ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ರಂಗಶಿಕ್ಷಣವನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಎಲ್ಲಾ ಕ್ಷೇತ್ರಗಳಲ್ಲಿಯೂ ನಿವೃತ್ತಿ ಎಂಬುದಿದೆ ಆದರೆ ಕಲಾವಿದರಿಗೆ ನಿವೃತ್ತಿಯಿಲ್ಲ, ಮಕ್ಕಳಿಗೆ ರಂಗ ಶಿಕ್ಷಣ ನೀಡಿ ಅವರನ್ನು ನಾಡಿನ ಉತ್ತಮ ನಾಗರಿಕರನ್ನಾಗಿಸುವ ರಂಗಭೂಮಿಯ ಈ ಅಭಿಯಾನದಲ್ಲಿ ಸಂಘಸಂಸ್ಥೆಗಳು ಕೈ ಜೋಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಅದಾನಿ ಪವರ್ನ ಎಜಿಎಂ ರವಿ ಜರೆ ಮಾತನಾಡಿ, ಕಳೆದ 6 ದಶಕಗಳಿಂದ ರಂಗಭೂಮಿಯ ಕಂಪನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ರಂಗಭೂಮಿ ಉಡುಪಿ ಸಂಸ್ಥೆ ಇದೀಗ ಮಕ್ಕಳನ್ನು ನಾಟಕದತ್ತ ಸೆಳೆಯಲು ರಂಗ ಶಿಕ್ಷಣವನ್ನು ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದರು.ಉದ್ಯಮಿ ಶ್ರೀಶ ನಾಯಕ್ ಪೆರಣಂಕಿಲ ಮಾತನಾಡಿ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳನ್ನು ನಾಟಕದತ್ತ ಸೆಳೆಯುವ ರಂಗಭೂಮಿ ಉಡುಪಿಯ ಪ್ರಯತ್ನ ಶ್ಲಾಘನೀಯ. ನಾಟಕದ ಮೂಲಕ ರಂಗಭೂಮಿ ಸಮಾಜವನ್ನು ಎಚ್ಚರಿಸುವ ಕಾರ್ಯ ನಡೆಸುತ್ತಿದೆ ಎಂದರು.ರಂಗಶಿಕ್ಷಣ ಯೋಜನೆಯ ಸಂಚಾಲಕ ವಿದ್ಯಾವಂತ ಆಚಾರ್ಯ ಸಮಾರೋಪ ಭಾಷಣ ಮಾಡಿದರು. ಲಯನ್ಸ್ ಜಿಲ್ಲಾ ಗವರ್ನರ್ ಸುನೀಲ್ ಸಾಲ್ಯಾನ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಂಗ ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ರಂಗಶಿಕ್ಷಣದ ಗುರುಗಳಿಗೆ ಗೌರವಾರ್ಪಣೆ ನಡೆಯಿತು.