ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ
ತಾವು ನಾಲ್ಕೈದು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡುವಂತೆ ಅಜ್ಜಂಪುರ ತಾಲೂಕಿನ ರಂಗಾಪುರದ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ದೇವರಾಜ ಅರಸು ವಿಚಾರ ವೇದಿಕೆ ಉಪಾಧ್ಯಕ್ಷ ಸಿ.ಆರ್. ಬಸವರಾಜ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರನ್ನು ಗುರುವಾರ ಭೇಟಿ ಮಾಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು.ಹಿಂದುಳಿದ ನಾಯಕ್ ಸಮುದಾಯಕ್ಕೆ ಸೇರಿರುವ ನಾವುಗಳು ರಂಗಾಪುರದ ಸರ್ವೇ ನಂ. 6 ಮತ್ತು 138 ರಲ್ಲಿ ತಲಾ 3 ಎಕರೆ ಭೂಮಿಯನ್ನು 40-50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಅತ್ಯಂತ ಕಡು ಬಡವರಾದ ನಮಗೆ ಆ ಭೂಮಿ ಯನ್ನು ಬಿಟ್ಟರೆ ಬದುಕಿಗೆ ಬೇರೆ ಯಾವುದೇ ಆಧಾರವಿಲ್ಲ, ಆ ಭೂಮಿಯನ್ನೇ ನಂಬಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.ನಾವು ಬದುಕನ್ನು ಕಟ್ಟಿಕೊಂಡಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂದು ಅಧಿಕಾರಿಗಳು ಇದೀಗ ಹೇಳುತ್ತಿದ್ದು ಸರಿಯಾಗಿ ಅಳತೆ ಮಾಡದೆ ನಮ್ಮ ಜಮೀನಿಗೆ ಚೆಕ್ ಬಂದಿ ನೀಡದೆ ಸಾಗುವಳಿ ಚೀಟಿ ವಿತರಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.