ಗಣೇಶ್ ತಮ್ಮಡಿಹಳ್ಳಿಕನ್ನಡಪ್ರಭ ವಾರ್ತೆ ಶಿವಮೊಗ್ಗ
ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ಗೋವಾ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೊದಲ ದಿನವಾದ ಶನಿವಾರ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಕರ್ನಾಟಕ ತಂಡಕ್ಕೆ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಆಸರೆಯಾದರು.ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತ ಕಂಡರೂ ಕರುಣ್ ನಾಯರ್ (86) ಅವರ ಅಮೋಘ ಅರ್ಧಶತಕ ಹಾಗೂ ಶ್ರೇಯಸ್ ಗೋಪಾಲ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಮೊದಲನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಮೊದಲ ದಿನ ಅಂತ್ಯಕ್ಕೆ 69 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಕಲೆ ಹಾಕಿದೆ.ಕರ್ನಾಟಕ ತಂಡದ ಪರ ಆರಂಭಿ ಬ್ಯಾಟ್ಸ್‌ಮನ್ ನಿಕಿನ್ ಜೋಸ್ (3), ವಿಕೆಟ್ ಕೀಪರ್ ಕೆ.ಎಲ್.ಶ್ರೀಜಿತ್ (0), ಆರ್.ಸ್ಮರಣ್ (3) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇತ್ತ ಆರಂಭದಿಂದಲೂ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ನಾಯಕ ಮಯಾಂಕ್ ಅಗರ್ವಾಲ್ (28) ಕೂಡ ವಿಕೆಟ್ ಒಪ್ಪಿಸಿ ಆಘಾತ ಮೂಡಿಸಿದರು. 65 ರನ್‌ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು.ಬಳಿಕ ಬಂದ ಅಭಿನವ್ ಮನೋಹರ್ (37) ಅವರು ಕರುಣ್ ನಾಯರ್ ಜೊತೆ ಸೇರಿ 63 ರನ್‌ಗಳ ಜೊತೆಯಾಟವಾಡಿದರು. ಈ ನಡುವೆ ಅರ್ಜುನ್ ತೆಂಡೂಲ್ಕರ್ ಅವರ ಬೌಲಿಂಗ್‌ನಲ್ಲಿ ಅಭಿನವ್ ಮನೋಹರ್ ವಿಕೆಟ್ ಒಪ್ಪಿಸಿದರು.ಕರುಣ್-ಗೋಪಾಲ್ ಜುಗಲ್‌ಬಂದಿ:
ಆರನೇ ವಿಕೆಟ್‌ಗೆ ಜೊತೆಯಾದ ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ಗೋವಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ 93 ರನ್‌ಗಳ ಜೊತೆಯಾಟವನ್ನು ಆಡಿ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡವನ್ನು ಮೇಲೆತ್ತಿದರು.ಶತಕದತ್ತ ಕರುಣ್:ತಂಡದ ಮೊತ್ತ 47 ಆದಾಗ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಕರುಣ್ ನಾಯರ್ ಮೊದಲ ದಿನ 86 ರನ್‌ಗಳು ಪೇರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಸೊಗಸಾಗಿ ಬ್ಯಾಟಿಂಗ್ ಮಾಡುತ್ತಿದ್ದರು. 138 ಎಸೆತಗಳನ್ನು ಎದುರಿಸಿದ ಅವರು ಇದರಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸ್ ಮೂಲಕ 86 ರನ್ ಗಳಿಸುವ ಮೂಲಕ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದರು.ಮಿಂಚಿದ ಶ್ರೇಯಸ್ ಗೋಪಾಲ್:
ಕರುಣ್ ನಾಯರ್ ಜೊತೆ 94 ರನ್‌ಗಳ ಜೊತೆಯಾಟದೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡ ಶ್ರೇಯಸ್ ಗೋಪಾಲ್ (48) ಅದ್ಭುತ ಇನಿಂಗ್ಸ್ ಆಡಿದರು. ಚೆಂಡು ಹಳೆಯದಾದ ಬಳಿಕ ಹೆಚ್ಚಿನ ತಿರುವು ಪಡೆಯುತ್ತಿದ್ದರೂ, ಅದನ್ನು ಈ ಜೋಡಿ ಸಮರ್ಥವಾಗಿ ನಿರ್ವಹಿಸಿರು. ವಿಶೇಷವಾಗಿ ಶ್ರೇಯಸ್ ಗೋಪಾಲ್ ಅದ್ಭುತ ಇನಿಂಗ್ಸ್ ಆಡಿದರು. ಅವರು ಆಡಿದ 84 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ 5 ಬೌಂಡರಿ ಸಮೇತ ಅಜೇಯ 48 ರನ್ ಬಾರಿಸಿದ್ದಾರೆ. ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 222 ರನ್ ಕಲೆ ಹಾಕಿದೆ.ಸಂಕ್ಷಿಪ್ತ ಸ್ಕೋರ್‌ಕರ್ನಾಟಕ: 69 ಓವರ್‌ಗಳಲ್ಲಿ 222/ 5 ( ಕರುಣ್ ನಾಯರ್ ಅಜೇಯ 86 , ಶ್ರೇಯಸ್ ಗೋಪಾಲ್ ಅಜೇಯ 48, ಅರ್ಜುನ್ ತೆಂಡೂಲ್ಕರ್ 47ಕ್ಕೆ 3, ವಿ.ಕೌಶಿಕ್ 24ಕ್ಕೆ 2).