ಇಂದಿನಿಂದ ಕೆಎಸ್‌ಸಿಎ ಮೈದಾನದಲ್ಲಿ ರಣಜಿ ಪಂದ್ಯ

KannadaprabhaNewsNetwork |  
Published : Oct 25, 2025, 01:00 AM IST
ಪೋಟೋ: 24ಎಸ್‌ಎಂಜಿಕೆಪಿ07 | Kannada Prabha

ಸಾರಾಂಶ

ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಗೋವಾ ವಿರುದ್ಧ ನಡೆಯಲಿರುವ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ ಸಜ್ಜಾಗಿದ್ದು, ಆಟಗಾರರು ಗುರುವಾರವೂ ಕಠಿಣ ಅಭ್ಯಾಸ ನಡೆಸಿದರು.

ಗಣೇಶ್ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಗೋವಾ ವಿರುದ್ಧ ನಡೆಯಲಿರುವ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ ಸಜ್ಜಾಗಿದ್ದು, ಆಟಗಾರರು ಗುರುವಾರವೂ ಕಠಿಣ ಅಭ್ಯಾಸ ನಡೆಸಿದರು.ಈ ಋುತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗೆದ್ದಿರುವ ಎದುರಾಳಿ ಗೋವಾ ತಂಡ ಗೆದ್ದಿರುವ ಹುಮ್ಮಸ್ಸಿನಿಂದ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ ಮೊದಲ ಗೆಲುವಿನ ತವಕದಲ್ಲಿದೆ. ರಾಜ್‌ಕೋಟ್‌ನಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ, 2014-15ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದೆ. ಎರಡನೇ ಪಂದ್ಯದಲ್ಲಿ ಸಮಾನ ಬಲಾಬಲದ ತಂಡವನ್ನು ಎದುರಿಸುವ ಸವಾಲು ರಾಜ್ಯ ತಂಡಕ್ಕಿದ್ದು, ಅನುಭವಿ-ಯುವ ಆಟಗಾರರ ಉತ್ತಮ ಮಿಶ್ರಣದೊಂದಿಗೆ ಆತ್ಮವಿಶ್ವಾಸದಲ್ಲಿದೆ.

ಅನುಭವಿ ಬ್ಯಾಟರ್ ಕರುಣ್ ನಾಯರ್ 3 ವರ್ಷಗಳ ಬಳಿಕ ರಾಜ್ಯ ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಿದೆ. ಆದರೆ, ಮೊದಲ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ನಿರೀಕ್ಷಿತ ರನ್‌ಗಳು ಬಂದಿಲ್ಲವಾದರೂ ಎರಡನೇ ಪಂದ್ಯದಲ್ಲಿ ಅವರು ಮಿಂಚುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ನಾಯಕ ಮಯಾಂಕ್‌ ಅಗರ್‌ವಾಲ್‌ಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಇವರಿಂದ ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಯುವ ಬ್ಯಾಟರ್‌ಗಳಾದ ಆರ್.ಸ್ಮರಣ್, ನಿಕಿನ್ ಜೋಸ್, ವಿಕೆಟ್ ಕೀಪರ್ ಕೆ.ಎಲ್.ಶ್ರೀಜಿತ್‌ ಉತ್ತಮ ಫಾರ್ಮ್ ಮುಂದುವರಿಸುವ ನಿರೀಕ್ಷೆ ಇದೆ.

ಇನ್ನು ಮೊದಲ ಪಂದ್ಯದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿರುವ ಅನುಭವಿ ವೈಶಾಕ್ ವಿಜಯ್‌ಕುಮಾರ್ ತಂಡದಲ್ಲಿದ್ದರೂ ಅವರು ಗಾಯದಿಂದ ಬಳಲುತ್ತಿರುವುದರಿಂದ ಗೋವಾ ವಿರುದ್ಧ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಉಳಿದಂತೆ ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ. ಒಳಗೊಂಡ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದರೆ, ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್‌ಗೆ ಯುವ ಸ್ಪಿನ್ನರ್‌ಗಳಾದ ಮೊನ್ಸಿನ್ ಖಾನ್ ಮತ್ತು ಎಡಗೈ ಸ್ಪಿನ್ನ‌ರ್ ಶಿಖ‌ರ್ ಶೆಟ್ಟಿ ಸಾಥ್ ನೀಡಲಿದ್ದಾರೆ.

ಸಾಂಕೇತಿಕವಾಗಿ ಉದ್ಘಾಟನಾ ಕಾರ್ಯಕ್ರಮ

ಅ.25ರಂದು ಬೆಳಗ್ಗೆ 9ಕ್ಕೆ ಟಾಸ್‌ ಹಾಕಲಾಗುವುದು. 9.30ಕ್ಕೆ ಮೊದಲ ಬಾಲ್ ಹಾಕುವುದರ ಮೂಲಕ ಚಾಲನೆ ದೊರೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಸಾಂಕೇತಿಕವಾಗಿ ನಡೆಯಲಿದ್ದು, ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್‌.ಅರುಣ್ ಆಗಮಿಸಲಿದ್ದಾರೆ.

ಕರ್ನಾಟಕ ಸಂಭಾವ್ಯ ತಂಡ

ಮಯಾಂಕ್ ಅಗರ್‌ವಾಲ್ (ನಾಯಕ), ಕರುಣ್ ನಾಯರ್ (ಉಪ ನಾಯಕ), ಶ್ರೀಜಿತ್ ಕೆ.ಎಲ್ (ವಿಕೇಟ್ ಕೀಪರ್), ಶ್ರೇಯಸ್ ಗೋಪಾಲ್, ಸ್ಮರಣ್ ಆರ್., ವಿದ್ವತ್ ಕಾವೇರಪ್ಪ, ಯಶೋವರ್ಧನ್, ಅಭಿಲಾಷ್‌ಶೆಟ್ಟಿ, ವೆಂಕಟೇಶ್ ಎಂ., ನಿಖಿನ್ ಜೋಷ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಅನೀಷ್.ಕೆ.ವಿ., ಮಸಿನ್‌ಖಾನ್, ಶಿಖರಶೆಟ್ಟಿ.

ಗೋವಾ ಸಂಭಾವ್ಯ ತಂಡ

ದೀಪ್‌ರಾಜ್ ಗಾಂವ್‌ಕರ್ (ನಾಯಕ), ಸಮರ್ ದುಬಾಷಿ (ಉಪನಾಯಕ), ಅರ್ಜುನ್ ತೆಂಡೂಲ್ಕರ್, ಲಲಿತ್ ಯಾದವ್, ಸುಯಾಸ್ ಪ್ರಭುದೇಸಾಯಿ, ಮಂಥನ್ ಕೌತುಕರ್, ಕಶ್ಯಪ್‌ಭಕ್ಲೆ, ದರ್ಶನ್ ನಿಸಾಲ್, ಮೋಹಿತ್ ರೆಡ್ಕರ್, ಅಭಿನವ್ ತೇಜರಾಣ, ಹೀರಂಬ ಪರಾಬೆ, ವಿಕಾಸ್‌ಸಿಂಗ್, ಈಶಾನ್ ಗಡೇಕರ್, ರಾಜಶೇಖರ್ ಹರಿಕಾಂತ್, ವಿಜೇಶ್ ಪ್ರಭು ದೇಸಾಯ್, ವಾಸುಕಿ ಕೌಶಿಕ್, ಸ್ನೇಹಲ್ ಕೌತನ್ಕರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ