ಕನ್ನಡಪ್ರಭ ವಾರ್ತೆ ಮಂಡ್ಯ
ಗರ್ಭಿಣಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಕಳೆದೆರಡು ವರ್ಷಗಳಿಂದ ಲ್ಯಾಪರೋಸ್ಕೋಪಿಕ್ ಗರ್ಭಕೋಶ ಚಿಕಿತ್ಸೆಗಳು ನಡೆಯುತ್ತಿದ್ದು ಪ್ರಥಮ ಬಾರಿಗೆ ಸುಮಾರು ಎರಡು ಕೆಜಿ ತೂಕವಿರುವ ಫೈಬ್ರಾಯಿಡ್ ಗಡ್ಡೆಯನ್ನು ಹೊಟ್ಟೆಯನ್ನು ಕೊಯ್ಯದೆ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಸಾಧನೆ ಮಾಡಲಾಗಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಗೀತಾ ಎಂಬುವರ ಹೊಟ್ಟೆಯಲ್ಲಿ ಗಡ್ಡೆ ಬೆಳೆದುಕೊಂಡಿತ್ತು. ಹೊಟ್ಟೆ ಊದಿಕೊಂಡು ನೋವು ಬರುತ್ತಿತ್ತು. ವೈದ್ಯರ ಬಳಿಗೆ ಬಂದು ತಪಾಸಣೆಗೊಳಗಾದಾಗ ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಿದರು. ಅದರಂತೆ ಸ್ಕ್ಯಾನಿಂಗ್ ಮಾಡಿಸಿ ನೋಡಿದಾಗ ಗಡ್ಡೆ ಬೆಳೆದುಕೊಂಡಿರುವುದು ಗೊತ್ತಾಯಿತು.ಗಡ್ಡೆ ಒಡೆಯುವ ಹಂತ ತಲುಪಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ದಾಖಲಿಸಿಕೊಳ್ಳಲಾಯಿತು. ಗರ್ಭಿಣಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಮಾರ್ಗದರ್ಶನದಲ್ಲಿ ಡಾ.ಸಂಜಯ್ ಮತ್ತು ಡಾ.ಯಾಶಿಕ ಅನಿಲ್ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಹೊಟ್ಟೆ ಕೊಯ್ಯದೆ ಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ ಹೊಟ್ಟೆಯಲ್ಲಿ ರಂಧ್ರ ಮಾಡಿ ಅದರ ಮೂಲಕ ಕ್ಯಾಮೆರಾ ಒಳಗಿಟ್ಟು ದೊಡ್ಡ ಗೆಡ್ಡೆಯನ್ನು ಮಾರ್‌ಸಲೇಟ್ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾದರು. ಶಸ್ತ್ರಚಿಕಿತ್ಸೆಗೊಳಗಾದ ಗೀತಾ ಈಗ ಆರಾಮವಾಗಿದ್ದಾರೆ. ಹದಿನೈದು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದು, ಆನಂತರ ದೈನಂದಿನ ಕೆಲಸಗಳನ್ನು ಮಾಡಬಹುದೆಂದು ವೈದ್ಯರು ಸಲಹೆ ನೀಡಿದ್ದಾರೆ.ಲ್ಯಾಪರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ ಮೂಲಕ ಮಹಿಳೆಯೊಬ್ಬರ ಹೊಟ್ಟೆಯಿಂದ ಎರಡು ಕೆಜಿ ಗಡ್ಡೆಯನ್ನು ಹೊರತೆಗೆದಿರುವುದು ಶ್ಲಾಘನೀಯ. ಹೊಟ್ಟೆಯನ್ನು ಕೊಯ್ಯದೆ ರಂಧ್ರಮಾಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎರಡು ವರ್ಷದಲ್ಲಿ ಈ ವಿಧಾನದಿಂದ ಸಾಕಷ್ಟು ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎರಡು ಕೆಜಿ ಗಡ್ಡೆ ಹೊರತೆಗೆದಿರುವುದು ಇದೇ ಮೊದಲು. ಬಿಪಿಎಲ್ ಕಾರ್ಡ್ ಇದ್ದವರಿಗೆ ಶಸ್ತ್ರಚಿಕಿತ್ಸೆ ಉಚಿತ. ಇಲ್ಲದಿದ್ದವರಿಗೆ ಅತಿ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ಮಿಮ್ಸ್‌ನ ಗರ್ಭಿಣಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯಕೀಯ ತಂಡಕ್ಕೆ ಅಭಿನಂದನೆಗಳು.