ಗದಗ: ಸರ್ವೋಚ್ಚ ನ್ಯಾಯಾಲಯ, ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಮಾರ್ಚ್ 8ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.
ಪ್ರತಿದಿನ ರಾಜೀಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂಧಪಟ್ಟ ವಕೀಲರು ಹಾಗೂ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಅವರ ಮನ ಒಲಿಸಿ ರಾಜೀ ಸಂಧಾನ ಮಾಡಿಕೊಳ್ಳಲು ತಿಳಿಯಪಡಿಸಲಾಗುವುದು, ಪ್ರಕರಣಗಳಿಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳವರು ಮಾ 8ರಂದು ಜರುಗುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನ ಮೂಲಕ ಪರಿಹರಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಪಕ್ಷಗಾರರು ನ್ಯಾಯಾಲಯಗಳಲ್ಲಿರುವ ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದರು.ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ಮಾತನಾಡಿ, ಕಳೆದ ಡಿಸೆಂಬರ್-2024 ರಂದು ಜರುಗಿದ ಲೋಕ ಅದಾಲತ್ ನಲ್ಲಿ 3042 ಚಾಲ್ತಿ ಪ್ರಕರಣಗಳನ್ನು ಹಾಗೂ 31540 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸೇರಿ ಒಟ್ಟು 34582 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಪಡಿಸಿದೆ. ಇದರಲ್ಲಿ ವಿಶೇಷವಾಗಿ 17 ಕೌಟುಂಬಿಕ ಪ್ರಕರಣಗಳನ್ನು ಪುನಃ ಒಂದುಗೂಡಿಸಿ ಕಳುಹಿಸಲಾಗಿದೆ ಎಂದು ಹೇಳಿದರು.
ಪಕ್ಷಗಾರರು ನ್ಯಾಯಾಲಯಗಳಲ್ಲಿರುವ ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಾರ್ತಾಧಿಕಾರಿ ವಸಂತ ಮಡ್ಲೂರ ಉಪಸ್ಥಿತರಿದ್ದರು.