ಹೊಸಪೇಟೆ: ಸಮೃದ್ಧ ಮಳೆ, ಬೆಳೆಗಾಗಿ, ಊರಿನ ಸುಭಿಕ್ಷೆಗಾಗಿ ಗ್ರಾಮದೇವತೆ ಊರಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ದೇವಿಯನ್ನು ರಥಮ್ಮನನ್ನಾಗಿಸಿ ಮಂಗಳವಾರ ಭವ್ಯ ಮೆರವಣಿಗೆ ನಡೆಸಿದರು.
ರಥಮ್ಮ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಊರಮ್ಮದೇವಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಿಗೆ ಉಡಿ ತುಂಬಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ರಥಮ್ಮ ಬರುವ ಮಾರ್ಗದ ಎರಡು ಬದಿಯಲ್ಲಿ ಸಹಸ್ರಾರು ಭಕ್ತರು, ಸಾಲುಗಟ್ಟಿ ನಿಂತು, ರಥಮ್ಮ ಮೆರವಣಿಗೆ ದಾರಿ ಉದಕ್ಕೂ ತುಂಬಿದ ಬಿಂದಿಯಿಂದ ನೀರು ಹಾಕಿ, ಸ್ವಾಗತ ಕೋರಿದರು. ಹೂ, ಹಣ್ಣು, ಕಾಣಿಕೆ ಸಲ್ಲಿಸಿ, ಭಕ್ತಿ ಮೆರೆದರು. ಏಳುಕೇರಿ ದೈವಸ್ಥರು, ಗ್ರಾಮದ ಮುಖಂಡರು ಸೇರಿದಂತೆ ಸಹಸ್ರಾರು ಭಕ್ತರು ಮೆರವಣಿಗೆ ಭಾಗವಹಿಸಿದ್ದರು.12 ವರ್ಷಕೊಮ್ಮೆ ರಥಮ್ಮ:
ಪ್ರತಿ 12 ವರ್ಷಕೊಮ್ಮೆ ನಡೆಯುವ ರಥಮ್ಮ ಮೆರವಣಿಗೆ ಸಕಾಲಕ್ಕೆ ಮಳೆ, ಬೆಳೆ ಹಾಗೂ ರೋಗ ರುಜಿನಗಳಿಂದ ಗ್ರಾಮವನ್ನು ಮುಕ್ತವಾಗಿಡಬೇಕು ಎಂದು ಗ್ರಾಮ ದೇವತೆ ಊರಮ್ಮದೇವಿ ಪ್ರಾರ್ಥಿಸಿ, ಪೂಜಿಸುವುದು ಅನಾದಿಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ರೈತಾಪಿ ಜನರು, ನಾಗರಿಕರು ಇದನ್ನು ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ.ರಥಮ್ಮನ ವಿಶೇಷ:
ಒಣಗಿದ ಅತ್ತಿ ಮರದಲ್ಲಿ ಗ್ರಾಮದೇವತೆ ಊರಮ್ಮನ ಮೂರ್ತಿಯನ್ನು ಕೆತ್ತನೆ ಮಾಡಿ ಅದಕ್ಕೆ ನಾಲ್ಕು ಗಾಲಿ ಜೋಡಿಸಿ, ರಥವನ್ನಾಗಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಥಮ್ಮ ಮೆರವಣಿಗೆ ಎಂದು ಭಕ್ತರು ಕರೆಯುತ್ತಾರೆ.ಒಂದೇ ದಿನದಲ್ಲಿ ಅತ್ತಿ ಮರದಲ್ಲಿ ಊರಮ್ಮದೇವಿಯ ಸುಂದರ ಮೂರ್ತಿ ಕೆತ್ತನೆ ಮಾಡಿ ಅದಕ್ಕೆ ಬಣ್ಣ ಹಚ್ಚಿ ಸುಂದರ ವಿಗ್ರಹವನ್ನಾಗಿ ರೂಪಿಸುತ್ತಾರೆ. ಇದಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಗ್ರಾಮದ ಗುರು, ಹಿರಿಯರು ಹಾಗೂ ಮುತ್ತೈದೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.