ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಬೆಳಗ್ಗೆ 10.05 ರಿಂದ 10.30ರವರೆಗೆ ಮೇಷ ಲಗ್ನದಲ್ಲಿ ಜರುಗಿದ ರಥೋತ್ಸವಕ್ಕೆ ಶಾಸಕ ಡಿ. ರವಿಶಂಕರ್ ತಮ್ಮ ಪತ್ನಿ ಸುನೀತಾ ಅವರೊಂದಿಗೆ ಚಾಲನೆ ನೀಡಿದರು. ನೆರೆದಿದ್ದ ಸಾವಿರಾರು ಭಕ್ತರು ದೇವರಿಗೆ ಜಯಘೋಷ ಕೂಗಿ ದೇವಾಲಯದ ಸುತ್ತ ಒಂದು ಸುತ್ತು ರಥವನ್ನು ಎಳೆದರು.
ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ದೇವರಿಗೆ ವಿಶಿಷ್ಟ ಅಲಂಕಾರ ಮಾಡಲಾಗಿತ್ತಲ್ಲದೆ ತಳಿರು ತೋರಣ ಮತ್ತು ಹೂಗಳಿಂದ ಶೃಂಗರಿಸಲಾಗಿತ್ತು.ಕೆ.ಆರ್. ನಗರ ಪಟ್ಟಣದ ಸೇರಿದಂತೆ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನ ನೂರಾರು ಗ್ರಾಮಗಳ ಭಕ್ತರು ಜಾತ್ರೆಗೆ ಭೇಟಿ ನೀಡಿ ರಥಕ್ಕೆ ಹಣ್ಣು ಧವನ ಎಸೆದು ಹರಕೆ ತೀರಿಸಿ, ಸರತಿ ಸಾಲಿನಲ್ಲಿ ನಿಂತು ಭಗವಂತನ ದರ್ಶನ ಪಡೆದರು. ಕೆಲವು ಭಕ್ತರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.
ಇದೇ ಮೊದಲ ಬಾರಿಗೆ ಪಟ್ಟಣದ ತೋಪಮ್ಮನವರ ದೇವಾಲಯದಿಂದ ಅರ್ಕೇಶ್ವರಸ್ವಾಮಿ ದೇವಾಲಯದವರೆಗೆ ಸುಮಾರು 3 ಕಿ.ಮೀ ದೂರ ರಸ್ತೆಯ ಉದ್ದಗಲಕ್ಕೂ ದೀಪಾಲಂಕಾರ ಮಾಡಿದ್ದು ವಿಶೇಷವಾಗಿತ್ತಲ್ಲದೆ, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಎಪಿಸಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್. ನಾಗೇಂದ್ರ, ಟಿಎಪಿಸಿಎಂಎಸ್ ನಿರ್ದೇಶಕರಾದ ಎಚ್.ಪಿ. ಪ್ರಶಾಂತ್, ಡಿ.ಸಿ. ರವಿ, ತೋಟಪ್ಪನಾಯಕ, ಪುರಸಭೆ ಮಾಜಿ ಸದಸ್ಯ ಕೆ.ವಿನಯ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ಮಾಜಿ ನಿರ್ದೇಶಕರಾದ ಕೆ.ಎಸ್. ಮಹೇಶ್, ಕೆ.ಎನ್. ಪ್ರಸನ್ನಕುಮಾರ್, ದೀಪು , ತಹಸೀಲ್ದಾರ್ ಸಿ.ಎಸ್. ಪೂರ್ಣಿಮ, ತಾಪಂ ಇಒ ಜಿ.ಕೆ. ಹರೀಶ್, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಸೇರಿದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.