ವಿಜೃಂಭಣೆಯ ಶಂಕರಲಿಂಗೇಶ್ವರನ ರಥೋತ್ಸವ

KannadaprabhaNewsNetwork | Published : Apr 1, 2024 12:45 AM

ಸಾರಾಂಶ

ಸುಪ್ರಸಿದ್ಧ ಈಡ್ಲೂರಿನ ಶಂಕರಲಿಂಗೇಶ್ವರನ ಜಾತ್ರೆಯು ಶನಿವಾರ ಸಾಯಂಕಾಲ 6 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ತಾಲೂಕಿನ ಪುರಾತನ ಶಿವ ದೇವಸ್ಥಾನ ಹಾಗೂ ತೆಲಂಗಾಣ ಕರ್ನಾಟಕದ ಗಡಿ ಭಾಗದಲ್ಲಿರುವ ಸುಪ್ರಸಿದ್ಧ ಈಡ್ಲೂರಿನ ಶಂಕರಲಿಂಗೇಶ್ವರನ ಜಾತ್ರೆಯು ಶನಿವಾರ ಸಾಯಂಕಾಲ 6 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.

ಜಿಲ್ಲೆಯ ಹಾಗೂ ರಾಜ್ಯದ ಇತರ ಭಾಗಗಳಿಂದ ಅಲ್ಲದೇ ತೆಲಂಗಾಣ ಇತರ ರಾಜ್ಯಗಳಿಂದ ಆಗಮಿಸಿದ ಅಪಾರ ಭಕ್ತಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾದರು.

ಜಾತ್ರೆಯ ನಿಮಿತ್ತ ಬೆಳಗ್ಗೆ ದೇವರಿಗೆ ಸಹಸ್ರ ಬಿಲ್ವಾರ್ಚನೆ, ಮಹಾ ರುದ್ರಾಬಿಷೇಕ ಮಹಾಪೂಜೆ ನಡೆಯಿತು. ಮಧ್ಯಾಹ್ನ ಶಂಕರಲಿಂಗನ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಇಡ್ಲೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದೇವಸ್ಥಾನ ತಲುಪಿತು.

ಸಾಯಂಕಾಲ ರಥದ ಸುತ್ತ ದೇವರನ್ನು ಹೊತ್ತ ಪಲ್ಲಕ್ಕಿಯನ್ನು ಪ್ರದಕ್ಷಿಣೆ ಹಾಕಿ ನಂತರ, ದೇವರ ಮೂರ್ತಿಯನ್ನು ರಥದ ಒಳಗಡೆ ಕೂರಿಸಲಾಯಿತು. ನೆರೆದ ಭಕ್ತ ಸಮೂಹವು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಶಂಕರಲಿಂಗೇಶ್ವರ ಮಹಾರಾಜಕೀ ಜೈ ಎನ್ನುತ್ತಾ ರಥವನ್ನು ಎಳೆದರು. ಶಂಕರಲಿಂಗೇಶ್ವರ ಮಹಾರಾಜಕೀ ಜೈ ಎಂಬ ಭಕ್ತರ ಘೋಷಣೆ ಮುಗಿಲು ಮುಟ್ಟಿತು. ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತತ್ತಿ, ಬಾಳೆಹಣ್ಣನ್ನು ಎಸೆದು ಭಕ್ತಿ ಸಮರ್ಪಿಸಿದರು.

ಪುರುವಂತರ ಸೇವೆ, ಪಲ್ಲಕ್ಕಿ, ಡೊಳ್ಳು ಕುಣಿತ ಇವೆಲ್ಲವು ಜಾತ್ರೆಗೆ ಹೆಚ್ಚಿನ ಕಳೆತಂದುಕೊಟ್ಟವು. ನಾನಾ ಕಡೆಯಿಂದ ಬಂದ ಬಕ್ತಾದಿಗಳು ಸಾಂಬಸದಾಶಿವ ಶಂಕರಲಿಂಗನ ದರ್ಶನ ಪಡೆದುಕೊಂಡು ಹೂವು ಕಾಯಿ ಅರ್ಪಿಸಿದರು.

ಗ್ರಾಮೀಣ ಭಾಗದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅತ್ಯಂತ ಉತ್ಸಾಹದಿಂದ ಜಾತ್ರೆಯಲ್ಲಿ ಭಾಗವಹಿಸಿದ್ದು, ಬೆಂಡು ಬತ್ತಾಸು ಮತ್ತು ಮಕ್ಕಳ ಆಟಿಕೆ ಸಾಮಾನುಗಳ ಖರೀದಿಯು ನಡೆದಿತ್ತು. ಜಾತ್ರೆ ಮತ್ತು ಉತ್ಸವಗಳು ದುಡಿದ ದೇಹ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುವುದು ಎನ್ನುವುದು ಭಕ್ತರ ಅಭಿಮತ. ಮಹಾರಥೋತ್ಸವದ ಮುನ್ನಾದಿನ ಶುಕ್ರವಾರ ಸಂಜೆ ಭಕ್ತರು ಶಂಕರಲಿಂಗೇಶ್ವರನ ಉಚ್ಚಾಯಿ ತೇರು ಎಳೆದು ಸಂಭ್ರಮಿಸಿದರು.

ಎತ್ತುಗಳ ಜಾತ್ರೆ: ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದು. ಈ ಜಾತ್ರೆಯ ವಿಶೇಷತೆ ಎಂದರೆ ಎತ್ತುಗಳ ಜಾತ್ರೆ. ನಾನಾ ಕಡೆಗಳಿಂದ ವಿವಿಧ ತಳಿಗಳ ಎತ್ತುಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಕಮ್ಮಮ್ಮ್ ಮತ್ತು ದೇವಣಿ ಎತ್ತುಗಳು ನೋಡುಗರ ಗಮನ ಸೆಳೆದವು. ರೈತಾಪಿವರ್ಗದವರು ಎತ್ತುಗಳನ್ನು ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು.

---

ಗುರುಮಠಕಲ್ ತಾಲೂಕಿನ ಈಡ್ಲೂರಿನ ಶಂಕರಲಿಂಗೇಶ್ವರನ ಜಾತ್ರೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.

Share this article