ಹುಬ್ಬಳ್ಳಿ: ರಂಗುರಂಗಿನ ಹೋಳಿ ಹಬ್ಬಕ್ಕೆ ವಾಣಿಜ್ಯ ನಗರಿ ಸನ್ನದ್ಧವಾಗಿದೆ. ಶುಕ್ರವಾರ ನಗರದ ನೂರಾರು ಕಡೆಗಳಲ್ಲಿ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಹೋಳಿಹಬ್ಬಕ್ಕೆ ಚಾಲನೆ ನೀಡಲಾಯಿತು.
ನಗರದ ದುರ್ಗದ ಬೈಲ್, ಮೇದಾರ ಓಣಿ, ಹೊಸಮೇದಾರ ಓಣಿ, ಕಮರಿಪೇಟೆ, ದಾಜಿಬಾನಪೇಟೆ, ಅಂಚಟಗೇರಿ ಓಣಿ, ಹಳೆ ಹುಬ್ಬಳ್ಳಿ, ತುಮಕೂರ ಓಣಿ, ಉಣಕಲ್ಲ, ಗೋಪನಕೊಪ್ಪ, ನವನಗರ, ಹೆಗ್ಗೇರಿ, ಉಣಕಲ್, ವಿದ್ಯಾನಗರ, ಆಸಾರ ಓಣಿ, ಆನಂದನಗರ ಸೇರಿದಂತೆ ನಗರಾದ್ಯಂತ ಶುಕ್ರವಾರ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಯಿತು.
76ನೇ ವರ್ಷದ ಆಚರಣೆಇಲ್ಲಿನ ಹಳೇ ಮೇದಾರ ಓಣಿ ಹಾಗೂ ಹೊಸ ಮೇದಾರ ಓಣಿಯಲ್ಲಿ ಪ್ರತಿಷ್ಠಾಪಿಸುವ ಬೃಹತ್ ಗಾತ್ರದ ಬಿದಿರಿನ ಕಾಮಣ್ಣಗಳು ನಗರದ ಪ್ರಮುಖ ಆಕರ್ಷಣೆಗೆ ಕಾರಣವಾಗಿವೆ. ಕಳೆದ 76 ವರ್ಷಗಳಿಂದ ಇಲ್ಲಿನ ಹಳೇ ಮೇದಾರ ಓಣಿಯಲ್ಲಿ ಬಿದಿರಿನಿಂದ 21 ಅಡಿ ಎತ್ತರ ಹಾಗೂ ಹೊಸ ಮೇದಾರ ಓಣಿಯಲ್ಲಿ 18 ಅಡಿ ಎತ್ತರದ ಬೃಹತ್ ಕಾಮಣ್ಣನನ್ನು ಬಿದಿರಿನಿಂದ ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ಎರಡೂ ಓಣಿಯ ಮೂರ್ತಿಗಳನ್ನು 5ನೇ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ಇಲ್ಲಿನ ದುರ್ಗದ ಬೈಲ್‌ನಲ್ಲಿ ಸಮ್ಮಿಲನಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ, ಕಳೆದ 35 ವರ್ಷಗಳಿಂದ ಈ ಪದ್ಧತಿ ನಿಲ್ಲಿಸಲಾಗಿತ್ತು. ಕಳೆದ ವರ್ಷದಿಂದ ಮತ್ತೆ ಚಾಲನೆ ನೀಡಲಾಗಿದೆ. 5ನೇ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ದುರ್ಗದಬೈಲಿನಲ್ಲಿ ಎರಡೂ ಬಿದಿರಿನ ಕಾಮಣ್ಣಗಳನ್ನು ಸಮ್ಮಿಲನಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ.
ಹರಕೆಯ ಕಾಮಣ್ಣ
ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಶುಕ್ರವಾರ ಸಂಜೆ ಪ್ರತಿಷ್ಠಾಪಿಸಿರುವ ರತಿ- ಕಾಮಣ್ಣನಿಗೆ 146 ವರ್ಷಗಳ ಇತಿಹಾಸವಿದೆ. ಇವು ಹರಕೆಯ ಕಾಮಣ್ಣ ಎಂದೇ ಹೆಸರು ಪಡೆದಿವೆ. ಶುಕ್ರವಾರ ಸಂಜೆ ಮೂರ್ತಿ ಪ್ರತಿಷ್ಠಾಪಿಸುತ್ತಿದಂತೆ ಸಾವಿರಾರು ಸಂಖ್ಯೆ ಸಾರ್ವಜನಿಕರು ತಾವು ಹೊತ್ತಿದ್ದ ಹರಕೆ ಈಡೇರಿಸಿದರು.ಬಣ್ಣದ ಖರೀದಿ ಜೋರು
ಹೋಳಿ ಹುಣ್ಣಿಮೆಯ ಅಂಗವಾಗಿ ನಗರದಾದ್ಯಂತ ಬಗೆಬಗೆಯ ಬಣ್ಣದ ಖರೀದಿ ಜೋರಾಗಿತ್ತು. ನಗರದ ದುರ್ಗದಬೈಲ್, ರಾಣಿ ಚೆನ್ನಮ್ಮ ವೃತ್ತದ ಬಳಿ, ಕೇಶ್ವಾಪುರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ, ಸಿಬಿಟಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬಗೆಬಗೆಯ ಬಣ್ಣದ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಗ್ರಾಮೀಣ ಪ್ರದೇಶದ ಜನತೆ ಹಾಗೂ ನಗರದ ಜನತೆ ಸೋಮವಾರ ಬಣ್ಣ ಖರೀದಿಸಿದರು.ಎಲ್ಲೆಡೆಯೂ ಹಲಗೆಗಳ ರಿಂಗಣ
ನಗರದಲ್ಲಿ ಎಲ್ಲಿ ನೋಡಿದರಲ್ಲಿ ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಹಲಗೆ, ತಮಟೆ ಬಾರಿಸುತ್ತ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ. ಗಲ್ಲಿಗಲ್ಲಿಗಳಲ್ಲೂ ಹಲಗೆ, ತಮಟೆಯ ಸದ್ದು ಜೋರಾಗಿತ್ತು. ಕೆಲವು ಕಡೆಗಳಲ್ಲಿ ಜಗ್ಗಲಗಿ ಬಾರಿಸಿ ಸಂಭ್ರಮಿಸಿದರು.