ಪಡಿತರ ಫಲಾನುಭವಿಗಳಿಗೆ ಮತ್ತೆ ಜೋಳದ ಭಾಗ್ಯ

KannadaprabhaNewsNetwork |  
Published : Jun 19, 2025, 11:48 PM IST
ಪೋಟೋ ಇದೆ. | Kannada Prabha

ಸಾರಾಂಶ

ಅನ್ನಭಾಗ್ಯ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಚೀಟಿದಾರರಿಗೆ ಈ ತಿಂಗಳಿಂದ (ಜೂನ್‌) ಜೋಳ ವಿತರಿಸಲಾಗುತ್ತಿದ್ದು, ಮೂರ್ನಾಲ್ಕು ದಿನದಲ್ಲಿ ಅಕ್ಕಿ ಜತೆಗೆ ಜೋಳವೂ ಫಲಾನುಭವಿಗಳ ಮನೆ ತಲುಪಲಿದೆ.

ಶಿವಾನಂದ ಅಂಗಡಿಹುಬ್ಬಳ್ಳಿ: ಅನ್ನಭಾಗ್ಯ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಚೀಟಿದಾರರಿಗೆ ಈ ತಿಂಗಳಿಂದ (ಜೂನ್‌) ಜೋಳ ವಿತರಿಸಲಾಗುತ್ತಿದ್ದು, ಮೂರ್ನಾಲ್ಕು ದಿನದಲ್ಲಿ ಅಕ್ಕಿ ಜತೆಗೆ ಜೋಳವೂ ಫಲಾನುಭವಿಗಳ ಮನೆ ತಲುಪಲಿದೆ. ರಾಗಿ ಮುದ್ದೆ ತಿನ್ನುವ ಜಿಲ್ಲೆಯ ಫಲಾನುಭ‍ವಿಗಳಿಗೆ ರಾಗಿ ವಿತರಿಸುವಂತೆ ರೊಟ್ಟಿ ತಿನ್ನುವ ಜಿಲ್ಲೆಗಳಲ್ಲಿ ಬಿಪಿಎಲ್‌ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ತಲಾ ಎರಡು ಕಿಲೋ, ಅಂತ್ಯೋದಯ ಕಾರ್ಡುದಾರರಿಗೆ 14 ಕಿಲೋ ಜೋಳ ವಿತರಣೆಯಾಗಲಿದೆ. ಈ ಹಿಂದೆಯೇ ಅಕ್ಕಿ ಜತೆಗೆ ಎರಡು ಕಿಲೋ ಜೋಳವನ್ನು ವಿತರಣೆಯಾಗುತ್ತಿತ್ತು. ಸ್ಟಾಕ್‌ ಇರುವವರೆಗೆ ಮೂರು ತಿಂಗಳು ವಿತರಿಸಿ ಬಂದ್‌ ಮಾಡಲಾಗಿತ್ತು. ಜೋಳದಲ್ಲಿ ನುಸಿ ಸೇರಿ ಹಿಟ್ಟಿನಂತಾಗಿದ್ದು, ಇಂಥ ಜೋಳ ವಿತರಣೆ ಬೇಡ ಎಂದು ಫಲಾನುಭವಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಬಳ್ಳಾರಿ, ರಾಯಚೂರಿನಲ್ಲಿ ಬೆಂಬಲ ಬೆಲೆಯಲ್ಲಿ ಜೋಳ ಖರೀದಿಸಲಾಗಿದ್ದು, ಪಡಿತರ ಫಲಾನುಭವಿಗಳಿಗೆ ವಿತರಣೆಗೆ ಶುಕ್ರವಾರ (ಜೂ. 20) ಎತ್ತುವಳಿ ಮಾಡಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಪಿಎಲ್‌ ಕಾರ್ಡ್‌ ಹೊಂದಿರುವ ಪ್ರತಿ ಸದಸ್ಯನಿಗೆ ಸದ್ಯ ಅನ್ನಭಾಗ್ಯ ಮತ್ತು ರಾಷ್ಟ್ರೀಯ ಭದ್ರತಾ ಯೋಜನೆಯಡಿ ಸೇರಿ 10 ಕಿಲೋ ಅಕ್ಕಿ ವಿತರಿಸಲಾಗುತ್ತಿದ್ದು, ಇನ್ನು ಮುಂದೆ 8 ಕಿಲೋ ಅಕ್ಕಿ, ಅದರ ಜತೆಗೆ 2 ಕಿಲೋ ಜೋಳವೂ ಸಿಗಲಿದೆ. ಅಂತ್ಯೋದಯ ಕಾರ್ಡದಾರರಿಗೆ 35 ಕಿಲೋ ಅಕ್ಕಿ ವಿತರಿಸಲಾಗುತ್ತಿತ್ತು, ಇನ್ನು ಮುಂದೆ 21 ಕಿಲೋ ಅಕ್ಕಿ 14 ಕಿಲೋ ಜೋಳ ಸಿಗಲಿದೆ. ಅಂತ್ಯೋದಯ ಕುಟುಂಬದಲ್ಲಿ 4 ಸದಸ್ಯರಿದ್ದಲ್ಲಿ 5 ಕಿಲೋ ಹೆಚ್ಚುವರಿ, 5 ಸದಸ್ಯರಿದ್ದಲ್ಲಿ 15 ಕಿಲೋ, 6 ಸದಸ್ಯರಿದ್ದಲ್ಲಿ 25 ಕಿಲೋ ಹೆಚ್ಚುವರಿ ಅಕ್ಕಿ, ಹೀಗೆ ಕುಟುಂಬ ಸದಸ್ಯರು ಹೆಚ್ಚು ಇದ್ದಲ್ಲಿ ಅಕ್ಕಿ ಹಂಚಿಕೆ ಹೆಚ್ಚಾಗಲಿದೆ.

ನಾಲ್ಕೈದು ಸದಸ್ಯರಿರುವ ಬಿಪಿಎಲ್‌ ಕಾರ್ಡ್‌ ಕುಟಂಬವೊಂದರಲ್ಲಿ 50 ಕಿಲೋವರೆಗೆ ಅಕ್ಕಿ ನೀಡಲಾಗುತ್ತಿದ್ದು, ಪ್ರತಿ ತಿಂಗಳು ಅಕ್ಕಿ ಹೆಚ್ಚಾಗಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯೋಜನೆಯಂತೆ ಫಲಾನುಭವಿಗಳಿಗೆ 8-10 ಕಿಲೋ ಜೋಳವೂ ಸಿಕ್ಕರೆ ಜೋಳ ಖರೀದಿಸುವ ಹೊರೆ ಕಡಿಮೆಯಾಗಲಿದೆ. ಜತೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟಕ್ಕೂ ಕಡಿವಾಣ ಬೀಳಲಿದೆ.

ಪಡಿತರ ಚೀಟಿ ಸದಸ್ಯನೋರ್ವನಿಗೆ ಮಾರ್ಚ್‌ ತಿಂಗಳಿನಿಂದ 10 ಕಿಲೋ ಅಕ್ಕಿ ವಿತರಣೆ ಆರಂಭಿಸಲಾಗಿದೆ. ಈ ವೇಳೆ ಫೆಬ್ರವರಿ ಪಡಿತರ ಸೇರಿ 15 ಕಿಲೋ ಅಕ್ಕಿ ವಿತರಿಸಲಾಗಿತ್ತು. ಹೆಚ್ಚು ಸದಸ್ಯರಿರುವ ಮನೆಗಳಲ್ಲಿ ಅಕ್ಕಿ ಸಂಗ್ರಹ ಹೆಚ್ಚಾಗುತ್ತಿದ್ದು, ಮಿಕ್ಕಿದ ಅಕ್ಕಿ ಅಕ್ರಮವಾಗಿ ಮಾರಾಟವಾಗುತ್ತಿತ್ತು. ಅಕ್ರಮವಾಗಿ ಮಾರಾಟದ ವೇಳೆ ಸಿಕ್ಕಿಬಿದ್ದರೆ ರೇಶನ್‌ ಕಾರ್ಡ್‌ನ್ನೇ ರದ್ದುಪಡಿಸುವುದಾಗಿ ಆಹಾರ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದರೂ ಮಾರಾಟದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದಕ್ಕೆ ಕಡಿವಾಣ ಹಾಕಲು ಆಹಾರ ಇಲಾಖೆ ಈ ತಿಂಗಳಿಂದ ಮತ್ತೆ ಜೋಳ ವಿತರಿಸಲು ಮುಂದಾಗಿದೆ.ಈ ಬಾರಿ ವಿಳಂಬ: ಪ್ರತಿ ತಿಂಗಳು ಎರಡನೇ ವಾರದಲ್ಲಿ ಪಡಿತರ ವಿತರಣೆಯಾಗುತ್ತದೆ. ಆದರೆ ಜೂನ್‌ ಮೂರನೇ ವಾರದಲ್ಲೂ ರಾಜ್ಯಾದ್ಯಂತ ಪಡಿತರ ವಿತರಣೆ ಆರಂಭವಾಗಿರಲಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಫಲಾನುಭವಿಗಳು ಪಡಿತರ ವಿತರಕರನ್ನು ಫೋನ್ ಮಾಡಿ ರೇಶನ್‌ ಕೇಳಿ ಕೇಳಿ ಸಾಕಾಗಿತ್ತು. ಇನ್ನು ಕೆಲವರು ಅಂಗಡಿವರೆಗೂ ಬಂದು ಹೋಗಿದ್ದುಂಟು. ಅಕ್ಕಿ ಜತೆಗೆ ಜೋಳ ವಿತರಣೆಗೂ ಮತ್ತೆ ಸಿದ್ಧತೆ ಕೈಗೊಂಡಿರುವುದು ಫಲಾನುಭವಿಗಳಿಗೆ ಖುಷಿ ತಂದಿದೆ.ನಮ್ಮ ಪಡಿತರ ಚೀಟಿಯಲ್ಲಿ 8 ಜನ ಇದ್ದೇವೆ. ಅಕ್ಕಿ ಜತೆಗೆ ಸದಸ್ಯನೋರ್ವನಿಗೆ ಎರಡೆರಡು ಕಿಲೋ ಜೋಳ ಸಹ ವಿತರಿಸಲು ಆರಂಭಿಸಿದ್ದರಿಂದ ಖುಷಿಯಾಗಿದೆ. ಮಾರುಕಟ್ಟೆಯಲ್ಲಿ ಜೋಳ ಖರೀದಿಸುವ ಹೊರೆ ತಪ್ಪಿದ್ದು, ಕುಟುಂಬಕ್ಕೆ ಆರ್ಥಿಕ ವೆಚ್ಚ ಸರಿದೂಗಿಸಲು ಸಹಕಾರಿಯಾಗಿದೆ ಎಂದು ಹುಬ್ಬಳ್ಳಿಯ ಮಾಧವನಗರದ ಪಡಿತರ ಚೀಟಿ ಫಲಾನುಭವಿ ನರಸಿಂಹ ಮುಷ್ಠಿಪಲ್ಲೆ ಹೇಳಿದರು.

ಜೂನ್‌ದಿಂದ ಪಡಿತರ ಫಲಾನುಭವಿಗಳಿಗೆ ಮತ್ತೆ ಜೋಳ ವಿತರಣೆ ಆರಂಭವಾಗಲಿದೆ. ಬಳ್ಳಾರಿಯಿಂದ ಧಾರವಾಡ ಜಿಲ್ಲೆಗೆ ಜೋಳ ಶುಕ್ರವಾರದಿಂದ ಎತ್ತುವಳಿ ಕೆಲಸ ಆರಂಭವಾಗಿದ್ದು, ಜೋಳ ಬಂದಂತೆ ವಿತರಣೆ ಪ್ರಕ್ರಿಯೆ ನಡೆಯಲಿದೆ. ಧಾರವಾಡ ಜಿಲ್ಲೆಗೆ 29 ಸಾವಿರ ಕ್ವಿಂಟಲ್‌ ಜೋಳ ಹಂಚಿಕೆಯಾಗಿದೆ ಎಂದು ಧಾರವಾಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ