ಕನ್ನಡಪ್ರಭ ವಾರ್ತೆ ಬೆಂಗಳೂರು / ಯಾದಗಿರಿ
ಮಹರ್ವಾಷಿ ವಾಲ್ಮಿಕಿ ನಿಗಮದಲ್ಲಿ ನಡೆದಿದ್ದ ಕೋಟ್ಯಂತರ ರು. ಹಗರಣದ ಬೆನ್ನಲ್ಲೇ, ಇದೀಗ ಪಡಿತರ ಅಕ್ಕಿ ಅಕ್ರಮದಲ್ಲಿ ಬಂಧಿತ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಲ್ಲೇ ಬರೆದಿದ್ದಾನೆನ್ನಲಾದ ಪತ್ರದಲ್ಲಿ ಅಕ್ರಮದಲ್ಲಿ ಹಾಲಿ ಸಚಿವರೊಬ್ಬರ ಹೆಸರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಜಿಲ್ಲೆಯ ಶಹಾಪುರದಲ್ಲಿ ಕಳೆದ ವರ್ಷ ನವೆಂಬರಿನಲ್ಲಿ ದಾಖಲಾಗಿದ್ದ 6 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣದ ಆರೋಪಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬರೆದಿದ್ದಾನೆ ಎನ್ನಲಾದ ಪತ್ರ ಭಾನುವಾರ ಸಂಜೆಯಿಂದ ಸಾಮಾಜಿಕ ಜಾಲತಾಣ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ. ಪ್ರಭಾವಿ ಸಚಿವರೊಬ್ಬರ ಹೆಸರು ಇಲ್ಲಿ ಉಲ್ಲೇಖಿಸಿದ್ದು, ಪತ್ರದ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ.
ಸರ್ಕಾರಿ ಗೋದಾಮಿನಿಂದ (ಟಿಎಪಿಸಿಎಂಎಸ್) ಅಂದಾಜು 2 ಕೋಟಿ ರು. ಮೌಲ್ಯದ, 6088 ಕ್ವಿಂ.ನಷ್ಟು ಪಡಿತರ ಅಕ್ಕಿ ದಾಸ್ತಾನು ನಾಪತ್ತೆಯಾಗಿರುವ ಬಗ್ಗೆ ನ.25, 2023 ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಇದಕ್ಕೆ ಸಂಬಂಧಿಸಿದಂತೆ ಆಗ ಹಲವರ ಬಂಧಿಸಿದ ವೇಳೆ ಆರೋಪಿಗಳ ಹೇಳಿಕೆ ಮೇರೆಗೆ, ವಿಚಾರಣೆ ಮುಂದುವರಿದ ಭಾಗವಾಗಿ ನಾಲ್ಕು ದಿನಗಳ ಹಿಂದೆ ಮಣಿಕಂಠನನ್ನು ಶಹಾಪುರ ಪೊಲೀಸರು ಕಲಬುರಗಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಬಂಧಿತ ಆರೋಪಿ ಮಣಿಕಂಠ ರಾಠೋಡ್, ಅಕ್ರಮದ ರೂವಾರಿ ಚಾಮನಾಳದ ಮಲ್ಲಿಕ್ ಎಂಬಾತನನ್ನು ಪಾರು ಮಾಡಿಸಲು ವಿನಾಕಾರಣ ತನ್ನನ್ನು ಈ ಅಕ್ಕಿ ಹಗರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೂರಿದ್ದಾನೆನ್ನಲಾಗಿದೆ.ಮಣಿಕಂಠ ಬರೆದಿದ್ದಾನೆ ಎನ್ನಲಾದ ಇಂತಹುದ್ದೊಂದು ಪತ್ರದಲ್ಲಿ ಸಚಿವರೊಬ್ಬರ ಹೆಸರು ಉಲ್ಲೇಖಿಸಿ, ಮಲ್ಲಿಕ್ ಎಂಬಾತನ ಮೂಲಕ ಸಚಿವರ ಭೇಟಿಯಾಗಿದ್ದೆ. ಆಗ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದು, ದುಡ್ಡಿನ ಅವಶ್ಯಕತೆ ಹಿನ್ನೆಲೆ ಪಡಿತರ ಅಕ್ಕಿ ಖರೀದಿಸುವಂತೆ ತನಗೆ ಹೇಳಲಾಗಿತ್ತು ಎಂದು ತಿಳಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಮತಕ್ಷೇತ್ರದಿಂದ ಪ್ರಿಯಾಂಕ ಖರ್ಗೆ ವಿರುದ್ಧ ಮಣಿಕಂಠ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸೋಲು ಕಂಡಿದ್ದರು. ಆ ವೇಳೆ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಣಿಕಂಠ, ಅಪಘಾತದ ಮೂಲಕ ತನ್ನ ಕೊಲೆಗೆ ಸಂಚು ನಡೆಸಲಾಗಿದೆ ಎಂಬ ಹೇಳಿಕೆ ಸೃಷ್ಟಿಸಲಾಗಿತ್ತು ಎಂದು ನಂತರದಲ್ಲಿ ಕೇಳಿಬಂದಿತ್ತು.