ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ರವೀಂದ್ರ ಮುದಿಯಪ್ಪನವರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಉಪ್ಪಾರ ಆಯ್ಕೆಯಾಗುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೇರಿದೆ.
ರಟ್ಟೀಹಳ್ಳಿ:ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ರವೀಂದ್ರ ಮುದಿಯಪ್ಪನವರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಉಪ್ಪಾರ ಆಯ್ಕೆಯಾಗುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೇರಿದೆ.
ಕಳೆದ ಆ.17ರಂದು ನಡೆದ 15 ವಾರ್ಡ್‌ಗಳ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ 7, ಬಿಜೆಪಿ 6 ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ವಿಜಯಶಾಲಿಯಾಗುವ ಮೂಲಕ ಅತಂತ್ರ ಫಲಿತಾಂಶ ಉಂಟಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಬಹುಮತ ಸಿಗದ ಕಾರಣ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯುವ ಉತ್ಸಾಹದಲ್ಲಿದ್ದ ಕಾಂಗ್ರೆಸ್‍ಗೆ ಭಾರಿ ಮುಖಭಂಗ ಉಂಟಾಗಿದೆ. ಚುನಾವಣೆಯ ಫಲಿತಾಂಶದ ದಿನವೇ ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ, ಪಕ್ಷದ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ 27ರಂದು ಹಾವೇರಿಯ ಕಾಂಗ್ರೆಸ್ ಕಚೇರಿಯಲ್ಲಿ 15ನೇ ವಾರ್ಡ್ ಹಾಗೂ 9ನೇ ವಾರ್ಡನ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಪಕ್ಷದ ಬಾವುಟ ಹಿಡಿದು ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಆದರೆ ಸೋಮವಾರ ನಡೆದ ರಾಜಕೀಯ ಕ್ಷೀಪ್ರ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಭಾರಿ ಮುಖಭಂಗ ಅನುಭವಿಸಿದೆ. 4ನೇ ವಾರ್ಡನ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಮುದಿಯಪ್ಪನವರ ಹಾಗೂ 9ನೇ ವಾರ್ಡನ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ ಪಕ್ಷದಲ್ಲಿ ನಡೆದ ಆಂತರಿಕ ಕಿತ್ತಾಟದಿಂದ ಬೇಸತ್ತು ಇಬ್ಬರು ಸೋಮವಾರ ಕಾಂಗ್ರೆಸ್‍ನಿಂದ ಹೊರಬಂದು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಯಿತು.ಅಧ್ಯಕ್ಷ ಸ್ಥಾನಕ್ಕೆ 4ನೇ ವಾರ್ಡನ ಬಿಜೆಪಿ ಬೆಂಬಲಿತ ಅಭ್ಯರ್ಥಿ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಸ್ಥಾನಕ್ಕೆ 9ನೇ ವಾರ್ಡನ ಶಿವಕುಮಾರ ಉಪ್ಪಾರ ಹಾಗೂ ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಚನ್ನಗೌಡ್ರ ಉಪಾಧ್ಯಕ್ಷ ಸ್ಥಾನಕ್ಕೆ ಮಕ್ಬುಲಸಾಬ್ ಮುಲ್ಲಾ ನಾಮಪತ್ರ ಸಲ್ಲಿಸಿದ್ದರು. ನಂತರ 2 ಗಂಟೆಗೆ ನಡೆದ ಮತದಾನದಲ್ಲಿ ರವೀಂದ್ರ ಮುದಿಯಪ್ಪನವರ ಹಾಗೂ ಶಿವಕುಮಾರ ಉಪ್ಪಾರ ಅವರಿಗೆ ಬಿಜೆಪಿಯ 6 ಸದಸ್ಯರು ಸೇರಿದಂತೆ ಸಂಸದ ಬಸವರಾಜ ಬೊಮ್ಮಾಯಿ ಅವರ ಮತವೂ ಲಭಿಸಿದ್ದು 9 ಮತ ಪಡೆದು ಜಯಶಾಲಿಯಾದರು. ಕಾಂಗ್ರೆಸ್‍ಗೆ ಶಾಸಕ ಯು.ಬಿ. ಬಣಕಾರ ಬೆಂಬಲದಿಂದ 8 ಮತ ಪಡೆದು ಕಾಂಗ್ರೆಸ್ ಸೋಲನುಭವಿಸಿತು. ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್ ಶ್ವೇತಾ ಅಮರಾವತಿ, ಪ್ರಶಾಂತ ಕುಲಕರ್ಣಿ ಕಾರ್ಯ ನಿರ್ವಹಿಸಿದರು. ಮಾಜಿ ಸಚಿವ ಬಿಸಿ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಲಿಂಗರಾಜ ಚಪ್ಪರದಹಳ್ಳಿ, ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಶಂಭಣ್ಣ ಗೂಳಪ್ಪನವರ, ರಾಘವೇಂದ್ರ ಹರವಿಶೆಟ್ಟರ್, ರವಿ ಶಂಕರ ಬಾಳಿಕಾಯಿ, ನಾಗರಾಜ ದ್ಯಾವಕ್ಕಳವರ, ಬಸವರಾಜ ಗಬ್ಬೂರ, ರಾಜು ಉಪ್ಪಾರ, ನಾಗರಾಜ ಉಪ್ಪಾರ ಮುಂತಾದವರು ಇದ್ದರು. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಸೂಚಿಸಿದ್ದರಿಂದ ನಮ್ಮೆಲ್ಲ ಬಿಜೆಪಿ ಸದಸ್ಯರು ಅವರಿಗೆ ಬೆಂಬಲ ಸೂಚಿಸಿ ಅಧ್ಯಕ್ಷರಾಗಿ ರವಿ ಮುದಿಯಪ್ಪನವರ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಉಪ್ಪಾರ ಅವರನ್ನು ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ಗೆದ್ದು ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಅವರ ಮೇಲೆ ವಿಪ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೋಳ್ಳಲಾಗುವುದು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.ಕಾಂಗ್ರೆಸ್ ಪಕ್ಷದಲ್ಲಿ ಅನೇಕ ವರ್ಷಗಳಿಂದ ದುಡಿದ ನನಗೆ ಅನ್ಯಾಯ ಮಾಡಿದ್ದರಿಂದ ಅಸಮಾಧಾನದಿಂದಾಗಿ ನಾನು ಹೊರ ಬಂದು ಸ್ಪರ್ಧಿಸಿದ್ದು, ಬಿಜೆಪಿ ಸದಸ್ಯರು, ಸಂಸದ ಬಸವರಾಜ ಬೊಮ್ಮಾಯಿ, ಪಕ್ಷದ ಮುಖಂಡರು ಹಾಗೂ ಸದಸ್ಯರು ಬೆಂಬಲ ಸೂಚಿಸಿದ್ದರಿಂದ ಅಧ್ಯಕ್ಷ ಸ್ಥಾನ ನೀಡಿದ್ದು ಮುಂಬರುವ ದಿನಗಳಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಅಧಿಕಾರ ನಡೆಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ನೂತನ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.