ರಟ್ಟೀಹಳ್ಳಿ: ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯಿತಿಯಾದ ಬಳಿಕ ಮೊದಲ ಬಾರಿ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 15 ಸ್ಥಾನಗಳ ಪೈಕಿ ಬಿಜೆಪಿ 6, ಕಾಂಗ್ರೆಸ್ 7 ಹಾಗೂ 2 ಸ್ಥಾನಗಳಲ್ಲಿ ಪಕ್ಷೇತರರು ಜಯಗಳಿಸಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯಲು ಸೆಣಸಾಡಿದರೂ ಮತದಾರ ಪ್ರಭುಗಳು ಮಾತ್ರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಇರುವ ಕಾರಣ ಪಕ್ಷೇತರ ಅಭ್ಯರ್ಥಿಗಳೇ ನಿರ್ಣಾಯಕರಾಗಿದ್ದಾರೆ. ಅವರು ಯಾವ ಪಕ್ಷಕ್ಕೆ ಬೆಂಬಲ ಸೂಚಿಸುವರೋ ಆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. ಹೀಗಾಗಿ ಇಬ್ಬರು ಪಕ್ಷೇತರ ಸದಸ್ಯರಿಗೆ ಭಾರಿ ಡಿಮ್ಯಾಂಡ್ ಬಂದಿದೆ.ಪಟ್ಟಣದ ತರಳಬಾಳು ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಂಡಿತು. 9.30 ಗಂಟೆ ಹೊತ್ತಿಗೆ ಎಲ್ಲ 15 ವಾರ್ಡ್‌ಗಳ ಫಲಿತಾಂಶ ಪ್ರಕಟವಾಯಿತು. ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸೂಕ್ತ ಬಂದೋಬಸ್ತ್: ಫಲಿತಾಂಶದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಹೆಚ್ಚುವರಿ ಎಸ್ಪಿ ಸೇರಿದಂತೆ 1 ಡಿವೈಎಸ್ಪಿ, 4 ಸಿಪಿಐ, 11 ಪಿಎಸ್‍ಐ, 100 ಪಿಸಿಗಳು 3 ಡಿಆರ್, 3 ಕೆಎಸ್‍ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ತಾಲೂಕು ದಂಡಾಧಿಕಾರಿ ಶ್ವೇತಾ ಅಮರಾವತಿ, ಸಿಪಿಐ ಬಸವರಾಜ ಪಿ.ಎಸ್., ಪಿಎಸ್‍ಐ ರಮೇಶ ಪಿ.ಎಸ್. ಸೇರಿದಂತೆ ಇತರ ಅಧಿಕಾರಿಗಳು ಇದ್ದರು.ಬೆಂಬಲ ಸೂಚಿಸುವ ವಿಶ್ವಾಸ: 6 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದು, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಬ್ಬರು ಬಂಡಾಯ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಅವರು ಮಾತೃ ಪಕ್ಷವನ್ನು ಬೆಂಬಲ ಸೂಚಿಸುವ ವಿಶ್ವಾಸವಿದೆ. ಅವರೊಂದಿಗೆ ಪಪಂ ಅಧಿಕಾರದ ಗದ್ದುಗೆ ಹಿಡಿದು ಪಟ್ಟಣದ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.ಅಭಿವೃದ್ಧಿ ಮುಖ್ಯ: 15 ವಾರ್ಡ್‌ಗಳಲ್ಲಿ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರರು ಆರ್ಶೀರ್ವಾದ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ನಮ್ಮ ಉದ್ದೇಶ ಎಲ್ಲ 15 ವಾರ್ಡ್‌ಗಳ ಅಭಿವೃದ್ಧಿ ಮಾಡುವುದಾಗಿದೆ. ನಮಗೆ ಅಧಿಕಾರಕ್ಕಿಂತ ಅಭಿವೃದ್ಧಿ ಮುಖ್ಯವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು. ಶೀಘ್ರ ನಿರ್ಧಾರ: ಮತದಾರರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದ ಕಾರಣ ನಮಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಪಟ್ಟಣದ ಹಾಗೂ ನಮ್ಮ ವಾರ್ಡ್‌ಗಳ ಅಭಿವೃದ್ಧಿ ಹಿತದೃಷ್ಟಿಯನ್ನಿಟ್ಟುಕೊಂಡು ಮತದಾರರು ಹಾಗೂ ಹಿರಿಯರೊಂದಿಗೆ ಚರ್ಚಿಸಿ ಯಾವ ಪಕ್ಷಕ್ಕೆ ಬೆಂಬಲ ಸೂಚಿಸುವುದರ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೆದ್ದ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ ತಿಳಿಸಿದರು.ಗೆಲುವಿನ ಸರದಾರರು
ವಾರ್ಡ್ ನಂ. 1 ಅಭ್ಯರ್ಥಿ ರವಿ ಹದಡೇರ(397) ಬಿಜೆಪಿವಾರ್ಡ್ ನಂ. 2 ಮಲ್ಲಮ್ಮ ಕಟ್ಟೇಕಾರ್(387) ಕಾಂಗ್ರೆಸ್ವಾರ್ಡ್ ನಂ. 3 ವೀರನಗೌಡ ಪ್ಯಾಟಿಗೌಡ್ರ(336) ಕಾಂಗ್ರೆಸ್ವಾರ್ಡ್ ನಂ. 4 ರವೀಂದ್ರ ಮುದಿಯಪ್ಪನವರ(342) ಕಾಂಗ್ರೆಸ್ವಾರ್ಡ್ ನಂ. 5 ಬಸವರಾಜ ಆಡಿನವರ(243) ಬಿಜೆಪಿವಾರ್ಡ್ ನಂ. 6 ಅರಶದಬಾನು ಗೊಡಿಹಾಳ(359) ಕಾಂಗ್ರೆಸ್ವಾರ್ಡ್ ನಂ. 7 ಪಿ.ಡಿ. ಬಸನಗೌಡ್ರ(297) ಕಾಂಗ್ರೆಸ್ವಾರ್ಡ್ ನಂ. 8 ಲಕ್ಷ್ಮೀ ರಮೇಶ ಚಿಕ್ಕಮೊರಬ(235) ಬಿಜೆಪಿವಾರ್ಡ್ ನಂ. 9 ಶಿವಕುಮಾರ ಉಪ್ಪಾರ(193) ಪಕ್ಷೇತರವಾರ್ಡ್ ನಂ. 10 ಸರ್ಫರಾಜ ನವಾಜ್ ಮಾಸೂರ(275) ಕಾಂಗ್ರೆಸ್ವಾರ್ಡ್ ನಂ. 11 ಮಖಬೂಲ್ ಮುಲ್ಲಾ(395) ಕಾಂಗ್ರೆಸ್ ವಾರ್ಡ್ ನಂ. 12 ಮಂಜುಳಾ ರಾಮಚಂದ್ರಪ್ಪ ಅಗಡಿ(206) ಬಿಜೆಪಿವಾರ್ಡ್ ನಂ. 13 ಶ್ರೀದೇವಿ ಶ್ರೀನಿವಾಸ ಬೈರೋಜಿಯವರ(469) ಬಿಜೆಪಿವಾರ್ಡ್ ನಂ. 14 ಬಸವರಾಜ ನರಸಪ್ಪ ಕಟ್ಟಿಮನಿ(439) ಬಿಜೆಪಿ ವಾರ್ಡ್ ನಂ. 15 ಲಲಿತಾ ಚನ್ನಗೌಡ್ರ (146)ಪಕ್ಷೇತರ