ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಕಳ್ಳೀಪುರ ರವಿ, ಉಪಾಧ್ಯಕ್ಷ ಹಂಗಳ ಬೇಬಿ ಅವಿರೋಧ ಆಯ್ಕೆಯಾಗಿದ್ದಾರೆ.ಗ್ರಾಮದ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಳ್ಳೀಪುರ ರವಿ, ಉಪಾಧ್ಯಕ್ಷ ಸ್ಥಾನಕ್ಕೆ ಹಂಗಳ ಬೇಬಿ ನಾಮಪತ್ರ ಸಲ್ಲಿಸಿದ್ದರು. ಇತರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಚುನಾವಣಾಧಿಕಾರಿ ನಾಗೇಶ್ ಆಯ್ಕೆಯನ್ನು ಘೋಷಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ, ಎಚ್.ಎಸ್.ನಂಜಪ್ಪಗೆ ಜೈಕಾರ ಹಾಕಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ನಿರ್ದೇಶಕರಾದ ಎಚ್.ಎನ್.ನಟೇಶ್, ಶಂಭಪ್ಪ, ಮಲ್ಲೇಶ್, ಬಿ.ಪುಟ್ಟನಾಗೇಗೌಡ, ಪ್ರಭುಸ್ವಾಮಿ, ಮಂಜುಳ, ಕಾಳೇಗೌಡ, ಬೆಳ್ಳಯ್ಯ, ದೊಡ್ಡಮ್ಮ, ವಿಜಯಕುಮಾರ, ಸಂಘದ ಸಿಇಒ ಎಚ್.ಆರ್.ಮಹೇಶ್ (ಕಿರಣ್) ಇದ್ದರು. ಹಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರ ಒಮ್ಮತದಿಂದ ಚರ್ಚಿಸಿದ ಬಳಿಕ ಸಂಘಕ್ಕೆ ಅವಿರೋಧ ಆಯ್ಕೆ ನಡೆದು, ಕಾಂಗ್ರೆಸ್‌ಗೆ ೮, ಬಿಜೆಪಿಗೆ ೪ ಕ್ಷೇತ್ರ ಬಿಟ್ಟು ಕೊಡಲಾಗಿತ್ತು. ಹಂಗಳ ಫ್ಯಾಕ್ಸ್ ನೂತನ ಅಧ್ಯಕ್ಷ ಕಳ್ಳೀಪುರ ರವಿ ಕಣ್ಣೇಗಾಲ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸಹಕಾರ ಕ್ಷೇತ್ರದತ್ತ ಮುಖ ಮಾಡಿದ ಮೊದಲ ಅವಧಿಯಲ್ಲೇ ಅಧ್ಯಕ್ಷ ಸ್ಥಾನ ದಕ್ಕಿದೆ.ಈ ವೇಳೆ ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು, ಹಂಗಳ ಫ್ಯಾಕ್ಸ್ ಮಾಜಿ ಅಧ್ಯಕ್ಷ ಎಚ್.ಎಂ.ಮಹೇಶ್, ಕಾಂಗ್ರೆಸ್ ಮುಖಂಡರಾದ ದೇವರಹಳ್ಳಿ ಪ್ರಭು, ಸಿದ್ದರಾಜು, ಕಳ್ಳೀಪುರ ಪುಟ್ಟೇಗೌಡ, ದೊರೆಸ್ವಾಮಿ, ಕುಣಗಳ್ಳಿ ಪ್ರಕಾಶ್, ಪಸಯ್ಯನಹುಂಡಿ ರಾಜು, ಶಿವಕುಮಾರ್, ಪ್ರಕಾಶ್, ರಾಜಶೇಖರ್ ಸೇರಿದಂತೆ ಹಲವರಿದ್ದರು.
ಅವಿರೋಧ ಆಯ್ಕೆಯಿಂದ ಸಂಘಕ್ಕೆಹಣ ಉಳಿತಾಯ: ನಂಜಪ್ಪಸಹಕಾರ ಸಂಘಗಳಲ್ಲಿ ಅವಿರೋಧ ಆಯ್ಕೆಯಾದರೆ ಸಂಘಕ್ಕೆ ಹಣ ಉಳಿಯಲಿದೆ. ಜೊತೆಗೆ ಸಂಘದ ಏಳಿಗೆಗೆ ಸಹಕಾರಿಯಾಗಲಿದೆ ಎಂದು ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹೇಳಿದರು. ನೂತನ ಅಧ್ಯಕ್ಷ ಕಳ್ಳೀಪುರ, ಉಪಾಧ್ಯಕ್ಷೆ ಬೇಬಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಚುನಾವಣೆ ನಡೆದರೆ ಸಂಘದಲ್ಲಿ ಹಣ ಪೋಲಾಗುತ್ತದೆ. ಸಹಕಾರ ಸಂಘಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಕುಳಿತು ಪರಸ್ಪರ ಮಾತನಾಡಿದರೆ ಅವಿರೋಧ ಆಯ್ಕೆಯಾಗಲಿದೆ. ಈ ನಿಟ್ಟಿನಲ್ಲಿ ಸಹಕಾರಿಗಳು ಚಿಂತನೆ ನಡೆಸಬೇಕು ಎಂದರು. ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಸಂಘದ ಬೆಳವಣಿಗೆ ಸಹಕಾರ ನೀಡಬೇಕು. ರೈತರ ಪರವಾಗಿ ಇದ್ದು ರೈತರ ನೆರವಿಗೆ ಸ್ಪಂದಿಸಿ ಕೆಲಸ ಮಾಡಿ ಎಂದರು.