ಗದಗ: ಪ್ರತಿವರ್ಷ ಮಾ. 24ರಂದು ವಿಶ್ವ ಕ್ಷಯರೋಗ ದಿನಾಚರಣೆ ನಡೆಯಲಿದೆ. ಕ್ಷಯಮುಕ್ತ ದೇಶವನ್ನಾಗಿ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗಕ್ಕೆ ಉಚಿತ ಕಫ ಪರೀಕ್ಷೆ ಮಾಡಲಾಗುತ್ತದೆ. ಕ್ಷಯರೋಗ ದೃಢಪಟ್ಟರೆ ನಿಗದಿತ ಅವಧಿಯ ವರೆಗೆ ಮಾತ್ರೆಗಳನ್ನು ಸಹ ನೀಡಲಾಗುತ್ತದೆ. ಕ್ಷಯರೋಗಕ್ಕೆ ಭಯಪಡದೇ ನಿಗದಿತ ಕಾಲಾವಧಿಯಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖ ಹೊಂದಬಹುದಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷಯರೋಗಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಮಾಡಲಾಗುತ್ತದೆ.ಶ್ವಾಸಕೋಶದ ಕ್ಷಯದಿಂದ ನರಳುವ ವ್ಯಕ್ತಿ ಕೆಮ್ಮುದಾಗ, ಸೀನಿದಾಗ, ಉಗುಳಿದಾಗ ಹೊರಬರುವ ಸೂಕ್ಷ್ಮ ದ್ರವ ತುಂತುರುಗಳ ಮೂಲಕ ಸೂಕ್ಷ್ಮ ಜೀವಿಗಳು ಇನ್ನೊಬ್ಬನ ದೇಹಕ್ಕೆ ಸೇರಿ ಆರೋಗ್ಯವಂತ ವ್ಯಕ್ತಿಗೆ ಸೋಂಕು ತಗಲುತ್ತದೆ. ಮಕ್ಕಳಲ್ಲಿ, ಮದ್ಯವ್ಯಸನಿಗಳಿಗೆ, ಎಚ್‌ಐವಿ ಪೀಡಿತರಿಗೆ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಿವೇಚನೆ ಇಲ್ಲದೇ ಎಲ್ಲೆಂದರಲ್ಲಿ ಉಗುಳುವುದು, ಸೀನುವುದು, ಬೀಡಿ-ಸಿಗರೇಟು, ಕುಡಿತ ಸೇವನೆ ಕೂಡಾ ಕ್ಷಯರೋಗಕ್ಕೆ ಪ್ರಮುಖ ಕಾರಣಗಳಾಗಿವೆ.
ಕ್ಷಯರೋಗದ ಕುರಿತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ, ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ. ಕಾರಾಗೃಹದಲ್ಲಿಯೂ ಸಹ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಷಯಮುಕ್ತ ಜಿಲ್ಲೆಯನ್ನಾಗಿಸುವುದು ಮುಖ್ಯ ಗುರಿಯಾಗಿದ್ದು ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಬಹುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ಕ್ಷಯಮುಕ್ತ ಗ್ರಾಪಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳನ್ನು ಸನ್ಮಾನಿಸಲಾಯಿತು. ಗದಗ ಜಿಮ್ಸ್ ಡಾ. ಅರವಿಂದ ಕರಿನಾಗಣ್ಣವರ ಕ್ಷಯರೋಗದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ.ಕೆ. ಭಜಂತ್ರಿ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ. ಆರೋಗ್ಯ ಇಲಾಖೆಯ ರೂಪಸೇನ ಚವ್ಹಾಣ ಹಾಜರಿದ್ದರು. ಉಷಾ ಕಾರಂತ ನಾಡಗೀತೆ ಪ್ರಸ್ತುತಪಡಿಸಿದರು. ಕಣವಿ ಸ್ವಾಗತಿಸಿದರು. ಎಸ್.ಎಸ್. ಪೀರಾ ಕಾರ್ಯಕ್ರಮ ನಿರೂಪಿಸಿದರು. ಮೋದಿನ್ನವರ ವಂದಿಸಿದರು.