ರವಿ ಕುಮಾರ್‌ಗೆ ಬಲವಂತದ ಕ್ರಮದಿಂದ ರಕ್ಷಣೆ

KannadaprabhaNewsNetwork |  
Published : Jul 04, 2025, 11:46 PM ISTUpdated : Jul 05, 2025, 11:12 AM IST
N Ravikumar

ಸಾರಾಂಶ

ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ಸೂಚಿಸಿರುವ ಹೈಕೋರ್ಟ್‌, ತನಿಖೆಗೆ ಸಹಕರಿಸುವಂತೆ ರವಿಕುಮಾರ್‌ಗೆ ನಿರ್ದೇಶಿಸಿದೆ.

 ಬೆಂಗಳೂರು :  ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ಸೂಚಿಸಿರುವ ಹೈಕೋರ್ಟ್‌, ತನಿಖೆಗೆ ಸಹಕರಿಸುವಂತೆ ರವಿಕುಮಾರ್‌ಗೆ ನಿರ್ದೇಶಿಸಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ದಾಖಲಿಸಿದ ದೂರು ಆಧರಿಸಿ ತಮ್ಮ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ರವಿಕುಮಾರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ಪೀಠ ಈ ಆದೇಶ ಮಾಡಿ ಇದೇ ತಿಂಗಳ 8ಕ್ಕೆ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಕೆಲ ಕಾಲ ರವಿಕುಮಾರ್‌ ಪರ ವಕೀಲರ ಮತ್ತು ಪೊಲೀಸರ ಪರ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ ಅವರ ಪ್ರತಿವಾದ ಆಲಿಸಿ, ಟ್ಯಾಬ್‌ ಮತ್ತು ಮೊಬೈಲ್‌ನಲ್ಲಿ ರವಿಕುಮಾರ್‌ ಅವರ ಹೇಳಿಕೆ ವೀಕ್ಷಿಸಿದ ನ್ಯಾಯಪೀಠವು, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ವಿಧಾನಸೌಧ ಠಾಣಾ ಪೊಲೀಸರಿಗೆ ನಿರ್ದೇಶಿಸಿತು.

ಅಲ್ಲದೆ, ರವಿಕುಮಾರ್‌ ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿದ ನ್ಯಾಯಪೀಠವು ಅರ್ಜಿಯಲ್ಲಿ ಪ್ರತಿವಾದಿ ವಿಧಾನಸೌಧ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿ ವಿಚಾರಣೆಯನ್ನು ಜು.8ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರ ಮತ್ತು ಸರ್ಕಾರದ ಪರ ಅಭಿಯೋಜಕರ ಆಕ್ರೋಶದ ವಾದ-ಪ್ರತಿವಾದಕ್ಕೆ ಸಾಕ್ಷಿಯಾಯಿತು.

ರವಿಕುಮಾರ್‌ ಪರ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ಅರ್ಜಿದಾರರರು ಮುಖ್ಯ ಕಾರ್ಯದರ್ಶಿಗೆ ಮೆಚ್ಚುಗೆ ಸೂಚಿಸಿ ಮಾತನಾಡಿದ್ದಾರೆಯೇ ಹೊರತು ದೂರುದಾರರು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಅಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದ್ದು, ಇದರ ಹಿಂದೆ ರಾಜಕೀಯ ಪಿತೂರಿ ಇದೆ. ರವಿಕುಮಾರ್‌ ತಮ್ಮ ಹೇಳಿಕೆಯ ಬಗ್ಗೆ ವಿವರಣೆ ಸಹ ನೀಡಿದ್ದು, ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಅದನ್ನು ತೀವ್ರ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ, ತಡ ರಾತ್ರಿಯಲ್ಲಿ ಮಹಿಳೆ ಮುಕ್ತವಾಗಿ ಓಡಾಡುವ ಸಂದರ್ಭ ನಿರ್ಮಾಣವಾದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಂತೆ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ಅವರ ಪ್ರತಿಮೆ ಮುಂದೆಯೇ ರಾಜ್ಯದ ಅತ್ಯುನ್ನತ ಅಧಿಕಾರಿಯಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ರವಿಕುಮಾರ್‌ ತುಚ್ಛವಾಗಿ ಮಾತನಾಡಿದ್ದಾರೆ. ಅವರಿಗೆ ಈ ರೀತಿ ಪದೇ ಪದೆ ಹೇಳಿಕೆ ನಿಡುವ ಚಾಳಿಯಿದೆ. ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ನಿಂದಿಸಿದ್ದರು. ಇನ್ನೊಬ್ಬ (ಸಿ.ಟಿ.) ರವಿ ಸದನದಲ್ಲೇ ಸಚಿವೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಆತನ ವಿರುದ್ಧದ ಪ್ರಕರಣ ರದ್ದುಪಡಿಸಲು ಇದೇ ಹೈಕೋರ್ಟ್‌ ಸಾರಾಸಟಗಾಗಿ ನಿರಾಕರಿಸಿತ್ತು ಎಂದು ಬಲವಾಗಿ ವಾದಿಸಿದರು.

ರವಿ ಕುಮಾರ್‌ ಹೇಳಿಕೆಯ ವಿಡಿಯೋ ಪರಿಶೀಲಿಸಿದ ಪೀಠ ಅಂಥದ್ದೇನೂ ಕಾಣುತ್ತಿಲ್ಲ. ತಡೆ ನೀಡಲಾಗುವುದು. ದೂರುದಾರೆ ಸಂತ್ರಸ್ತೆಯಲ್ಲವಲ್ಲ ಎಂದ ಹೇಳಿತು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಬೆಳ್ಳಿಯಪ್ಪ, ಎಲ್ಲಾ ಪ್ರಕರಣಗಳಲ್ಲೂ ಈ ರೀತಿ ತನಿಖೆಗೆ ತಡೆ ನೀಡುತ್ತಾ ಹೋದರೆ ಪೊಲೀಸರ ಮನೋಬಲ ಏನಾಗಬೇಕು? ಸರ್ಕಾರದ ಮುಖ್ಯ ಕಾಯದರ್ಶಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರಬಹುದು. ಆದರೆ, ಯಾರು ಬೇಕಾದರೂ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಬಹುದು. ರವಿಕುಮಾರ್‌ ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅಲ್ಲಿಯೇ ಹೋಗಲಿ. ಪ್ರಕರಣ ದಾಖಲಾದ 24 ಗಂಟೆಯಲ್ಲೇ ಹೈಕೋರ್ಟ್‌ಗೆ ಧಾವಿಸಿದ್ದಾರೆ. ಇದು ಸಂಜ್ಞೇ (ಕಾಗ್ನಿಜಬಲ್‌) ಅಪರಾಧವಾಗಿದೆ. ಸುದ್ದಿ ವಾಹಿನಿ ಸಂಪಾದಕರು, ಸ್ಥಳದಲ್ಲಿದ್ದ ಪೊಲೀಸರು, ಮುಖ್ಯ ಕಾರ್ಯದರ್ಶಿ ಹೇಳಿಕೆ ದಾಖಲಿಸಿ, ರವಿಕುಮಾರ್‌ ಹೇಳಿಕೆ ಹಿಂದಿನ ಉದ್ದೇಶ ಯಾವುದು ಎನ್ನುವುದನ್ನು ಪತ್ತೆ ಮಾಡಲಾಗುವುದು. ಹೀಗಾಗಿ, ತನಿಖೆಗೆ ತಡೆ ನೀಡಬಾರದು ಎಂದು ಕೋರಿದರು.

ಆಗ ಅರ್ಜಿದಾರರ ಪರ ವಕೀಲರು, ರವಿಕುಮಾರ್‌ ಮನೆ ಮುಂದೆ ಹತ್ತು ಮಂದಿ ಪೊಲೀಸರು ಬಂಧನಕ್ಕೆ ಕಾದು ಕೂತಿದ್ದಾರೆ. ಇದು ತಡೆಯಾಜ್ಞೆ ನೀಡಬೇಕಾದ ಮತ್ತು ಅರ್ಜಿದಾರರಿಗೆ ರಕ್ಷಣೆ ನೀಡಲೇಬೇಕಾದ ಪ್ರಕರಣ. ತಡೆ ನೀಡಿದರೆ ಪೊಲೀಸರ ಮನೋಬಲ ಕುಂದುತ್ತದೆ ಎನ್ನುವುದಾದರೆ, ಮುಖ್ಯಮಂತ್ರಿ ಅವರು ಬೆಳಗಾವಿಯಲ್ಲಿ ಎಸಿಪಿಗೆ ಕೈ ಎತ್ತಿದಾಗ ಏನು ಆಗಲಿಲ್ಲವೇ? ಎಂದು ಸರ್ಕಾರಿ ಅಭಿಯೋಜಕರಿಗೆ ತಿರುಗೇಟು ನೀಡಿದರು.

ಅಂತಿಮವಾಗಿ ತನಿಖೆಗೆ ತಡೆಯಾಜ್ಞೆ ನೀಡುವ ನಿರ್ಧಾರವನ್ನು ಬಲಿಸಿದ ನ್ಯಾಯಪೀಠ, ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಿತು.

PREV
Read more Articles on