ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರವಿಕೆಯನ್ನು ಆಧಾರವಾಗಿಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗ ಮೂಲಕ ದೃಷ್ಟಿ ಮಿಡಿಯಾ ಪ್ರೊಡಕ್ಷನ್ ವತಿಯಿಂದ ಶೀಘ್ರವೇ ರವಿಕೆ ಪ್ರಸಂಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ ಎಂದು ಚಲನಚಿತ್ರದ ನಿರ್ದೇಶಕ ಸಂತೋಷ ಕೂಡಂಕೇರಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರವಿಕೆ ಪ್ರಸಂಗ ಚಲನಚಿತ್ರ ಕುಟುಂಬಸ್ಥರು ನೋಡುವಂತಹ ಸಿನಿಮಾವಾಗಿದೆ. ಇದು ವಿಭಿನ್ನ ಭಾಷೆಯ ಚಿತ್ರವಾಗಿದ್ದು, ಗೀತಾ ಭಾರತಿಭಟ್ ನಟಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶುದ್ಧ ಕನ್ನಡ ಭಾಷೆಯನ್ನು ಬಳಕೆ ಮಾಡಿ ಈ ಚಿತ್ರ ನಿರ್ಮಿಸಲಾಗಿದೆ.
ಚಿತ್ರವನ್ನು ದಕ್ಷಿಣ ಕನ್ನಡ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಒಟ್ಟು 3 ಹಾಡುಗಳಿವೆ. ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ಸಿನಿಮಾವನ್ನು ತೆಗೆಯುವುದು ದೊಡ್ಡ ಮಾತಲ್ಲ. ಆದರೆ, ಅದನ್ನು ಜನರಿಗೆ ತಲುಪಿಸುವುದು ಮುಖ್ಯವಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಜನವರಿಯಲ್ಲಿ ಬಿಡುಗಡೆಗೊಳಿಸುವ ಇಚ್ಛೆ ಹೊಂದಲಾಗಿದೆ ಎಂದರು.ಕಥೆ ಮತ್ತು ಸಂಭಾಷಣೆ ಬರೆದ ಪಾವನಾ ಸಂತೋಷ ಮಾತನಾಡಿ, ಈ ಚಿತ್ರದಲ್ಲಿ ಒಂದು ರವಿಕೆ ಸರಿಯಾಗಿ ಹೊಲಿಗೆ ಆಗದಿದ್ದರೆ ಏನ್ನೆಲ್ಲ ಆಗುತ್ತದೆ ಎಂಬುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ರವಿಕೆ ತೊಟ್ಟ ಒಂದು ಹೆಣ್ಣು ಮಗಳನ್ನು ಈ ಸಮಾಜದಲ್ಲಿ ಯಾವ ದೃಷ್ಟಿಯಿಂದ ನೋಡುತ್ತಾರೆ ಎಂಬುದನ್ನು ಚಿತ್ರದಲ್ಲಿ ತೊರಿಸಲಾಗಿದೆ ಎಂದರು.
ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಸುಮನ್ ರಂಗನಾಥ, ಪದ್ಮಜಾ ರಾವ್, ರಾಕೇಶ್ ಮೈಯ್ಯ, ರಘು ಪಾಂಡೇಶ್ವರ, ಸಂಪತ್ ಮೈತ್ರಿಯಾ, ಕೃಷ್ಣಮೂರ್ತಿ ಕವತಾರ, ಹನಮಂತ ಕೌಜಲಗಿ, ಹನುಮಂತೇಗೌಡ್ರು, ಪ್ರವೀಣ್ ಅಥರ್ವ, ಮೀನಾ ಸೇರಿದಂತೆ ಹಲವರು ನಟಿಸಿದ್ದಾರೆ ಎಂದರು. ವಿನಯ ಶರ್ಮಾ ಸಂಗೀತ ನಿರ್ದೇಶನ, ಕಿರಣ್ ಕಾವೇರಪ್ಪ ಸಾಹಿತ್ಯ, ಚೈತ್ರಾ ಎಚ್.ಜಿ. ಜೋಗಿ ಸುನೀತಾ, ಮಾನಸಾ ಹೊಳ್ಳ, ಚೇತನ್ ನಾಯಕ ಚಿತ್ರದ ಗೀತೆಗೆ ಸ್ವರ ನೀಡಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ತೆರೆ ಮೇಲೆ ಶೀಘ್ರದಲ್ಲಿಯೇ ಕಾಣಿಸಿಕೊಳ್ಳಲಿದೆ ಎಂದರು.ಈ ವೇಳೆ ನೂರಅಹ್ಮದ ಮಕಾಂದಾರ ಇದ್ದರು.