ಕನ್ನಡಪ್ರಭ ವಾರ್ತೆ ಬೆಳಗಾವಿಬ್ರಿಟೀಷರ ವಿರುದ್ಧ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಸೇರಿ ಒಟ್ಟು ಏಳು ಜನರನ್ನು ನಂದಗಡದಲ್ಲಿ ನೇಣಿಗೆ ಹಾಕಲಾಗಿದೆ. ರಾಯಣ್ಣನ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಿದಂತೆ ಉಳಿದ ಆರು ಹುತಾತ್ಮರ ಸಮಾಧಿ ಸ್ಥಳಗಳನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.
ರಾಯಣ್ಣನ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. 2024ರಲ್ಲಿ ಸಂಗೊಳ್ಳಿಯಲ್ಲಿ ಶೌರ್ಯಭೂಮಿ ಹಾಗೂ ಸೈನಿಕ ಶಾಲೆಯನ್ನು ಉದ್ಘಾಟಿಸಲಾಗಿದೆ. ಈಗ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಹಾಗೂ ಅವರನ್ನು ನೇಣು ಹಾಕಿದ ನಂದಗಡ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ದೇಶಪ್ರೇಮಿಯಾಗಿದ್ದು, ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ರಾಯಣ್ಣನ ಹುಟ್ಟೂರು ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಹಾಗೂ ಅವರನ್ನು ನೇಣು ಹಾಕಿದ ನಂದಗಡ ಎರಡೂ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಾಗಬೇಕು ಎಂಬುದು ನನ್ನ ಆಸೆ. ಅದಕ್ಕೆ ಬೇಕಾದ ಕೆಲಸ ಮಾಡಲಾಗುತ್ತಿದೆ ಎಂದರು.ಇತಿಹಾಸ ಪ್ರಜ್ಞೆ ಇದ್ದವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಆ ಪ್ರಜ್ಞೆಯಿಂದ ಈ ವೀರಭೂಮಿ, ಸಂಗೊಳ್ಳಿಯಲ್ಲಿ ಸೈನಿಕ ಶಾಲೆ, ಶೌರ್ಯವನ ಮುಂತಾದ ಕೆಲಸಗಳನ್ನು ಮಾಡಿದ್ದೇವೆ. ಈ ಸೈನಿಕ ಶಾಲೆಯಲ್ಲಿ 388 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ನಾವು ಗುಲಾಮಗಿರಿ ರೂಢಿಸಿಕೊಳ್ಳಬಾರದು. ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಕಾರ್ಯವಾಗಬೇಕು ಎಂದು ಅವರು ಆಗ್ರಹಿಸಿದರು.ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯಿರಿ:ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕರ್ನಾಟಕದಲ್ಲಿ ಇರುವ ಎಲ್ಲರೂ ಕನ್ನಡ ಕಲಿಯಲೇ ಬೇಕು ಎನ್ನುವ ಮೂಲಕ ಕನ್ನಡ ವಿರೋಧಿ ಎಂಇಎಸ್ ನಾಯಕರಿಗೆ ತಿರುಗೇಟು ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರು ಮರಾಠಿಯಲ್ಲಿ ಮಾತು ಆರಂಭಿಸಿದರು. ಆಗ ಜನ ಕನ್ನಡ, ಕನ್ನಡ ಎಂದು ಕೂಗಿದರು. ಆಗ, ನನಗೆ ಕನ್ನಡ ಬರುವುದಿಲ್ಲ ಎಂಬುದು ನಿಮಗೆ ಗೊತ್ತು. ಸಿದ್ದರಾಮಯ್ಯನವರಿಗೆ ಮರಾಠಿ ಅರ್ಥವಾಗುವುದಿಲ್ಲ ಎಂಬುದು ನನಗೂ ಗೊತ್ತು. ನನ್ನ ಬೇಡಿಕೆಗಳನ್ನು ಕನ್ನಡದಲ್ಲಿಯೇ ಬರೆಸಿಕೊಂಡು ತಂದಿದ್ದೇನೆ. ಖಾನಾಪುರದಲ್ಲಿ ಕನ್ನಡ-ಮರಾಠಿ ಎಂಬ ಭೇದ-ಭಾವವಿಲ್ಲ. ಎಲ್ಲರೂ ಚೆನ್ನಾಗಿದ್ದೇವೆ ಎಂದರು.ಬಳಿಕ, ಉದ್ಘಾಟನಾ ಭಾಷಣ ಮಾಡಿದ ಸಿದ್ದರಾಮಯ್ಯ, ಇಲ್ಲಿರುವವರು ಮಾತ್ರವಲ್ಲ, ಕರ್ನಾಟಕದ ಯಾವುದೇ ಭಾಗದಲ್ಲಿರಲಿ. ಕನ್ನಡ ನೆಲದ ಅನ್ನ ಉಂಡ ಮೇಲೆ ಕನ್ನಡ ಭಾಷೆಯನ್ನು ಕಲಿಯಲೇ ಬೇಕು. ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡಬೇಕು. ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ ಎಂದರು.ಡಿಜಿಪಿ ವಿರುದ್ಧ ಶಿಸ್ತು ಕ್ರಮ:ಡಿಜಿಪಿ ರಾಮಚಂದ್ರರಾವ್ ಮಹಿಳೆಯರೊಂದಿಗಿನ ಅನುಚಿತ ವರ್ತನೆ ಆರೋಪ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಪ್ರಕರಣದ ಕುರಿತು ವಿಚಾರಣೆ ನಡೆಸಿ ಅಗತ್ಯವಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಉನ್ನತಮಟ್ಟದ ಅಧಿಕಾರಿಯೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಹೇಳಿದರು.
ವಿಪಕ್ಷಗಳಿಂದ ಸುಳ್ಳು ಆರೋಪ:ಮುಖ್ಯಮಂತ್ರಿ ಹಾಗೂ ಸಚಿವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಶಾಸಕ ಜನಾರ್ಧನ ರೆಡ್ಡಿಯವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಜನಾರ್ಧನ ರೆಡ್ಡಿಯವರು ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಜೈಲಿಗೆ ಹೋಗಿರುವುದು ಎಲ್ಲರಿಗೂ ತಿಳಿದ ವಿಚಾರ. ಅವರ ವಿರುದ್ಧದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ವಿಚಾರಣೆಯಲ್ಲಿದೆ. ಇಂತವರು ಆರೋಪ ಮಾಡುವ ನೈತಿಕ ಹಕ್ಕು ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದರು.ವಿರೋಧಪಕ್ಷಗಳು ಸುಳ್ಳು ಆರೋಪಗಳ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ಜನವರಿ 22ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲೇ ವಿರೋಧಪಕ್ಷಗಳು ಚರ್ಚೆ ನಡೆಸಲಿ ಎಂದು ಹೇಳಿದರು.2.5 ವರ್ಷ ಬಳಿಕ ಬಾದಾಮಿಗೆ ಸಿದ್ದು ಭೇಟಿ, ಚಾಲುಕ್ಯ ಉತ್ಸವಕ್ಕೆ ಚಾಲನೆ:ಬಾಗಲಕೋಟೆ: 2025-26ರ ಬಜೆಟ್‌ನಲ್ಲಿ ಮಾಡಿದ ಘೋಷಣೆಯಂತೆ ಬಾದಾಮಿಯ ಐತಿಹಾಸಿಕ ಪರಂಪರೆ ಸಾರುವ ‘ಚಾಲುಕ್ಯ ಉತ್ಸವ’ಕ್ಕೆ ಚಾಲನೆ ನೀಡಲು ಸಂತಸವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರ ಬಿಟ್ಟು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದ ಸಿದ್ದರಾಮಯ್ಯ, ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸೋಮವಾರ ಬಾದಾಮಿಗೆ ಆಗಮಿಸಿದರು. ಚಾಲುಕ್ಯ ಉತ್ಸವ ಉದ್ಘಾಟನೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಾಲುಕ್ಯ ಉತ್ಸವ 10 ವರ್ಷಗಳಿಂದ ನಡೆದಿರಲಿಲ್ಲ. ಬಜೆಟ್‌ನಲ್ಲಿ ಘೋಷಣೆಯಾದಂತೆ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದರು. ನಾನು ಶಾಸಕನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆ ತಂದಿದ್ದೆ. ಇದೇ ಅಭಿವೃದ್ಧಿಯನ್ನು ಈಗಿನ ಶಾಸಕರು ಮುಂದುವರಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಇಲ್ಲಿನ ಆಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.