ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಲಕ್ಷ್ಮೀಪುರಂನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಆವರಣದಲ್ಲಿ ಭರತ ನೃತ್ಯ ಸಂಗೀತ ಅಕಾಡೆಮಿ, ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ಗುರುವಾರ ಆಯೋಜಿಸಿದ್ದ 3ನೇ ಪ್ರದರ್ಶಕ ಕಲೆಗಳ ರಾಷ್ಟ್ರೀಯ ಸಮ್ಮೇಳನ ಮತ್ತು ಶಾಸ್ತ್ರೀಯ ನೃತ್ಯೋತ್ಸವ– 2025 ಅನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶಾಸ್ತ್ರೀಯ ನೃತ್ಯದಲ್ಲಿ ಇತ್ತೀಚೆಗೆ ಕನ್ನಡದ ದೇವರನಾಮ, ಶೃಂಗಾರ ಪದ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೊದಲು ಬೇರೆ ಬೇರೆ ಭಾಷೆಯ ಶ್ಲೋಕ, ಗೀತೆ ಬಳಸಿಕೊಳ್ಳಲಾಗುತ್ತಿತ್ತು. ಈಗ ಬದಲಾವಣೆಯಾಗಿದೆ. ಕನ್ನಡದ ಕವಿಗಳ ಪದ್ಯ, ದೇವರ ಕುರಿತು ರಚಿಸಿರುವ ಕವಿತೆಗಳನ್ನು ನೃತ್ಯ ಪ್ರದರ್ಶನದಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವುದು ವಿಶೇಷ ಎಂದು ಅವರು ಹೇಳಿದರು.ಶಾಸ್ತ್ರೀಯ ನೃತ್ಯವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಸುವ ಸಂಪ್ರದಾಯಬದ್ಧ ನೃತ್ಯ ರೂಪವಾಗಿದೆ. ಭರತನಾಟ್ಯ ಸೇರಿದಂತೆ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಉಳಿಸಿ, ಬೆಳೆಸಿ ಸಂರಕ್ಷಿಸಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಶಿಕ್ಷಣ ರೂಪದಲ್ಲಿ ವಿದ್ವತ್ ಕಲಿಯಬೇಕು. ವೃತ್ತಿಯಾಗಿ ಬೆಳೆಸಿಕೊಂಡಲ್ಲಿ ನಮ್ಮ ಕಲೆ ಉಳಿಸಬಹುದು ಎಂದು ಸಲಹೆ ನೀಡಿದರು.ಕರ್ನಾಟಕದಲ್ಲಿ ನೃತ್ಯ ಪ್ರದರ್ಶನಗಳು ನಡೆದು ಬಂದ ದಾರಿ ಕುರಿತು ಪ್ರೊ.ಕೆ. ರಾಮಮೂರ್ತಿ ರಾವ್ ಮಾತನಾಡಿ, ಶಾಸ್ತ್ರೀಯ ನೃತ್ಯ ಪ್ರದರ್ಶನದ ಶೈಲಿಯಲ್ಲಿ ಬದಲಾವಣೆಗಳು ಆಗಿವೆ. ಬದಲಾವಣೆಗೆ ಒಗ್ಗಿಕೊಂಡಿದೆ. ಈ ಮೂಲಕ ನಿಂತ ನೀರಲ್ಲ. ಚಲನಶೀಲತೆ ಹೊಂದಿದೆ ಎನ್ನುವುದು ತೋರಿಸಿಕೊಟ್ಟಿದೆ. ಇತ್ತೀಚಿನ ದಶಕಗಳಲ್ಲಿ ಶಾಸ್ತ್ರೀಯ ನೃತ್ಯಗಳಲ್ಲಿ ಶೃಂಗಾರ ಪದ, ಶಿವಶರಣರ ವಚನ, ದೇಶಭಕ್ತಿಗೀತೆ, ಕಂದಪದ್ಯ, ಗಮಕ ಅಳಡಿಸಿಕೊಳ್ಳಲಾಗುತ್ತಿದೆ ಎಂದರು.
ಶಾಸ್ತ್ರೀಯ ನೃತ್ಯದಲ್ಲಿ ಕನ್ನಡ ಅಂದು- ಇಂದು- ನಾಳೆ ಕುರಿತು ಡಾ. ತುಳಸಿ ರಾಮಚಂದ್ರ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್, ಭರತ ನೃತ್ಯ ಸಂಗೀತ ಅಕಾಡೆಮಿ ನಿರ್ದೇಶಕಿ ಡಾ. ಶುಭಾರಾಣಿ ಬೋಳಾರ್ ಇದ್ದರು.
----ಕೋಟ್...
ಶಾಸ್ತ್ರೀಯ ನೃತ್ಯ ಪ್ರತಿಭೆ ಪ್ರದರ್ಶಿಸುವ ಅಪೂರ್ವ ಕಲೆ. ನೃತ್ಯ ಪ್ರಕಾರಗಳು ದೇಶದ ಸಂಸ್ಕೃತಿ ಜೀವಂತವಾಗಿರಿಸಲು ಸಾಕ್ಷೀಕರಿಸಿವೆ. ಭರತನಾಟ್ಯವು ಯೋಗ ಸಂಯೋಜನೆಯ ವಿಶಿಷ್ಟ ಪ್ರಕಾರವಾಗಿದ್ದು, ವೇದಿಕೆಗೆ ಮಾತ್ರ ಸೀಮಿತವಾಗಿಲ್ಲ. ನೃತ್ಯ ಕಲೆ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ.- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ