ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಮುಖ್ಯ ರಸ್ತೆಗೆ ೨ ಕೋಟಿ ರು. ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ಪಟ್ಟಣದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೭೫ ರ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆಲೂರು ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿರುವುದರಿಂದ ಈಗಾಗಲೇ ಹಲವು ರಸ್ತೆ ಅಪಘಾತಗಳು ಸಂಭವಿಸಿ, ಕೆಲವು ಮಂದಿ ಮೃತಪಟ್ಟರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡು ಅಂಗವೈಕಲ್ಯದಿಂದ ಬಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಪಘಾತ ತಪ್ಪಿಸುವ ಸಲುವಾಗಿ ಸರ್ಕಾರ ಮತ್ತು ಸಂಬಂಧಪಟ್ಟ ಮಂತ್ರಿಗಳ ಗಮನ ಸೆಳೆಯುವ ಮೂಲಕ ಅನುದಾನ ತಂದು ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
ಮೊದಲ ಹಂತದಲ್ಲಿ ವೀರಶೈವ ಕಲ್ಯಾಣ ಮಂಟಪದಿಂದ ವಿಶ್ವೇಶ್ವರಯ್ಯ ಶಾಲೆಯವರೆಗೆ ೨ ಕೋಟಿ ರು. ವೆಚ್ಚದಲ್ಲಿ ೧.೨ ಕಿ.ಮೀ. ಮರು ಡಾಂಬರೀಕರಣ ಮಾಡಲಾಗುವುದು. ಎರಡನೇ ಹಂತದಲ್ಲಿ ವಿಶ್ವೇಶ್ವರಯ್ಯ ಶಾಲೆಯಿಂದ ೪೦೦ ಮೀಟರ್ ದ್ವಿಮುಖ ರಸ್ತೆ ಮಾಡಿ ಮದ್ಯದಲ್ಲಿ ಹೂವಿನ ಗಿಡಗಳನ್ನು ನೆಡಲಾಗುವುದು.ಮೂರನೇ ಹಂತದಲ್ಲಿ ವೀರಶೈವ ಕಲ್ಯಾಣ ಮಂಟಪದಿಂದ ಬೈರಾಪುರದವರೆಗೂ ಮತ್ತು ಮುಂದುವರಿದ ಕಾಮಗಾರಿ ೪೦೦ ಮೀಟರ್ ದ್ವಿಮುಖ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ೭೫ರವರೆಗೆ ದ್ವಿಮುಖ ರಸ್ತೆ ಕಾಮಗಾರಿಯನ್ನು ಮಾಡಲಾಗುವುದು ಎಂದರು.
ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಡಿವೈಡರ್‌ನಿಂದ ಪ್ರತಿನಿತ್ಯ ವಾಹನ ಸವಾರರು ಅಪಘಾತಕ್ಕೀಡಾಗುತಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸೂಚನಾ ಫಲಕ ಅಳವಡಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೆರಾ ಬೇಗಂ, ಸದಸ್ಯರಾದ ತೌಫಿಕ್ ಅಹಮದ್, ಹರೀಶ್, ಧರ್ಮ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಆಲೂರು ಕಟ್ಟಾಯ ಮಂಡಲ ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣ, ಬಿಜೆಪಿ ಮುಖಂಡರುಗಳಾದ ರಮೇಶ್, ಹೇಮಂತ, ಭರಣ್, ನವೀನ್, ಲೋಕೇಶ್, ಅಜಿತ್, ಗಣೇಶ್, ನಂಜುಂಡಪ್ಪ, ಬಾಲಲೋಚನ, ಕರಿಯಪ್ಪ ಉಪಸ್ಥಿತರಿದ್ದರು.