ದೀರ್ಘ ಕಾಲದ ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ನನ್ನನ್ನು ಮರು ಆಯ್ಕೆ ಮಾಡಿ

KannadaprabhaNewsNetwork | Published : Jun 2, 2024 1:46 AM

ಸಾರಾಂಶ

4 ಬಾರಿ ವಿಧಾನಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಈಗ 5ನೇ ಬಾರಿ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದೇನೆ. ಇದು ತಮಗೆ ದೊರೆತಿರುವ ಸುವರ್ಣ ಅವಕಾಶವಾಗಿದೆ. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರ, ಶಿಕ್ಷಕರು, ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಹೀಗಾಗಿ, ಈಗ ತಾವು ಆಯ್ಕೆಯಾದಲ್ಲಿ ಈ ಕ್ಷೇತ್ರದ ಸಮಸ್ಯೆ ಬಗೆಹರಿಸಲು, ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯ ದೊರಕಿಸಿಕೊಡಲು ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ದೀರ್ಘ ಕಾಲದ ಶಿಕ್ಷಕರ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳಲು ನನಗೆ ಅವಕಾಶ ಸಿಕ್ಕಿದೆ. ಶಿಕ್ಷಕರು ಇದನ್ನು ಸೂಕ್ಷ್ಮವಾಗಿ ಗಮನಿಸಿ ನನ್ನನ್ನು ಮರು ಆಯ್ಕೆ ಮಾಡಬೇಕು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 24 ವರ್ಷಗಳ ಅವಧಿಯಲ್ಲಿ ನಾನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕಾಗಿ ನಡೆಸಿದ ಹೋರಾಟ, ಅವುಗಳಿಂದ ದೊರೆತ ಪ್ರತಿಫಲ ಗಮನಿಸಿ ತಮಗೆ ಮೊದಲ ಪ್ರಾಶಸ್ತ್ಯದ ಮತ ನೀಡುತ್ತಾರೆಂಬ ವಿಶ್ವಾಸವಿದೆ ಎಂದರು.

4 ಬಾರಿ ವಿಧಾನಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಈಗ 5ನೇ ಬಾರಿ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದೇನೆ. ಇದು ತಮಗೆ ದೊರೆತಿರುವ ಸುವರ್ಣ ಅವಕಾಶವಾಗಿದೆ. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರ, ಶಿಕ್ಷಕರು, ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಹೀಗಾಗಿ, ಈಗ ತಾವು ಆಯ್ಕೆಯಾದಲ್ಲಿ ಈ ಕ್ಷೇತ್ರದ ಸಮಸ್ಯೆ ಬಗೆಹರಿಸಲು, ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯ ದೊರಕಿಸಿಕೊಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಇನ್ನೂ ನಾಲ್ಕು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತರಲು ಇದೊಂದು ಪರ್ವ ಕಾಲವಾಗಿದೆ. 6ನೇ ವೇತನ ಆಯೋಗವನ್ನು ಸಿದ್ದರಾಮಯ್ಯ ಅವರು ಈ ಹಿಂದೆ ಯಥಾವತ್ತಾಗಿ ಜಾರಿಗೊಳಿಸಿದ್ದಾರೆ. 7ನೇ ವೇತನ ಆಯೋಗ ಜಾರಿ ಭರವಸೆ ಇದೆ. ಬಡ್ತಿ ಪಡೆದ ಶಿಕ್ಷಕರಿಗೆ ಕಡಿಮೆ ವೇತನ ದೊರೆಯುತ್ತಿದೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಯ ಬೋಧಕ, ಬೋಧಕೇತರರಿಗೂ ಪಿಂಚಣಿ, ಆರೋಗ್ಯ ವಿಮೆ ಮೊದಲಾದವನ್ನು ದೊರಕಿಸಿಕೊಡಬೇಕಾಗಿದೆ ಎಂದು ಅವರು ಹೇಳಿದರು.

ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ತಾವು ಆಡಳಿತ ಪಕ್ಷದಿಂದ ಆಯ್ಕೆಯಾದರೆ ಶಿಕ್ಷಕರ ದೀರ್ಘಕಾಲದ ಸಮಸ್ಯೆ ಪರಿಹರಿಸಲು ಸುಲಭವಾಗುತ್ತದೆ. ಆದ್ದರಿಂದ ತಮ್ಮ ಅನುಭವ, ಇದುವರೆಗೆ ಈ ವರ್ಗಕೆ ಮಾಡಿರುವ ಹೋರಾಟ, ದೊರೆತ ಪ್ರತಿಫಲ ಗಮನಿಸಿ ತಮ್ಮನ್ನು ಇನ್ನೊಮ್ಮೆ ಚುನಾಯಿಸಬೇಕು ಎಂದು ಅವರು ಕೋರಿದರು.

ಮಾಜಿ ಮೇಯರ್ ಪುರುಷೋತ್ತಮ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಪ್ರೊ. ಜಯರಾಮಯ್ಯ ಇದ್ದರು.ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರತಿಯೊಂದೂ ಮತಕ್ಕೂ 9 ಸಾವಿರ ಹಂಚುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಇವರು ಉಡುಗೊರೆ, ಪಾರ್ಟಿಗಳನ್ನೂ ಮಾಡುತ್ತಿದ್ದಾರೆಂದು ವದಂತಿ ಹರಡಿದೆ. ಆದರೆ, ಶಿಕ್ಷಕರು ಇವುಗಳಿಂದಾಗಿ ತಮ್ಮ ಆತ್ಮಗೌರವ ಕಳೆದುಕೊಳ್ಳುವುದಿಲ್ಲ. ಎಲ್ಲಾ ಚುನಾವಣೆಗಳಲ್ಲೂ ಸಿದ್ಧಾಂತವೇ ಗೆಲ್ಲುತ್ತೆ. ಹಾಗೆಯೇ, ಶಿಕ್ಷಕರ ಕ್ಷೇತ್ರದಲ್ಲೂ ಸಿದ್ಧಾಂತವೇ ಗೆಲ್ಲುತ್ತೆ.

- ಮರಿತಿಬ್ಬೇಗೌಡ, ಕಾಂಗ್ರೆಸ್ ಅಭ್ಯರ್ಥಿಶಿಕ್ಷಕರ ಬೇಡಿಕೆ ಈಡೇರಿಸಲು ಇದು ಸಕಾಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಮರಿತಿಬ್ಬೇಗೌಡ ಅವರು ಸದನದ ಒಳಗೆ, ಹೊರಗೆ ಈ ನಿಟ್ಟಿನಲ್ಲಿ ಹೋರಾಟ ನಡೆಸಿದ್ದಾರೆ. ಹೀಗಾಗಿ ಇನ್ನಷ್ಟು ಹೋರಾಟ ನಡೆಸಲು ಶಿಕ್ಷಕರು ಮತ್ತೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಬೇಕು.

- ಎಚ್.ಎ. ವೆಂಕಟೇಶ್, ಕೆಪಿಸಿಸಿ ವಕ್ತಾರರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿಗಳ ಪರ ಸದಾ ಇದೆ. ಹೀಗಾಗಿ, ಮರಿತಿಬ್ಬೇಗೌಡ ಅವರು ಆಯ್ಕೆಯಾದರೆ ಇನ್ನಷ್ಟು ಅನುಕೂಲವಾಗಲಿದೆ. ಹೀಗಾಗಿ, ಎಸ್ಸಿ, ಎಸ್ಟಿ ವರ್ಗದ ಮತದಾರರು ಮರೆಯದೇ ಮರಿತಿಬ್ಬೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಬೆಂಬಲಿಸಬೇಕು.

- ಪುರುಷೋತ್ತಮ್, ಮಾಜಿ ಮೇಯರ್‌

Share this article