ಕುಮ್ಡೇಲು ಶ್ರೀ ನಾಗಬ್ರಹ್ಮ ಸನ್ನಿಧಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ

KannadaprabhaNewsNetwork | Published : Apr 24, 2025 12:07 AM

ಸಾರಾಂಶ

ಪುದು ಹಾಗೂ ತುಂಬೆ ಗ್ರಾಮದ ಗಡಿಭಾಗದಲ್ಲಿರುವ ಕುಮ್ಡೇಲು ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ನೂತನ ಶಿಲಾಮಯ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ೭೫ನೇ ವರ್ಷಾವಧಿ ನೇಮೋತ್ಸವ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪಾಶ್ಚಾತ್ಯ ವಿಕೃತಿ ಸಂಸ್ಕೃತಿ ಅನುಕರಿಸುವ ಪ್ರಯತ್ನ ಇಂದು ನಡೆಯುತ್ತಿದ್ದು ಹಿಂದೂ ಧರ್ಮದ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟಿದ್ದಾರೆ.

ಪುದು ಹಾಗೂ ತುಂಬೆ ಗ್ರಾಮದ ಗಡಿಭಾಗದಲ್ಲಿರುವ ಕುಮ್ಡೇಲು ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ನೂತನ ಶಿಲಾಮಯ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ೭೫ನೇ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ನಡೆದ ಸುಧರ್ಮ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾತ್ರ ಮಹಿಳೆಯರನ್ನು ಗೌರವಿಸಲಾಗುತ್ತದೆ. ನಮ್ಮಲ್ಲಿ ಧರ್ಮದ ಭಾಷೆಯನ್ನು ಕಲಿಸುವ ಪ್ರಯತ್ನ ನಡೆದಿಲ್ಲ. ಇದರಿಂದ ಧರ್ಮ ದುರ್ಬಲಗೊಳ್ಳುತ್ತಿದೆ. ಜಿಹಾದಿ ಮಾನಸಿಕತೆಯಿಂದ ಹಿಂದೂಗಳಿಗೆ ಅಪಾಯ ಎದುರಾಗಿದೆ ಎಂದರು.

ಹಿಂದುಗಳು ಯಾರಿಗೂ ಅನ್ಯಾಯ ಮಾಡಿದವರಲ್ಲ, ಅದರೆ ನಮ್ಮ ಮೇಲೆ ದಾಳಿಯಾದಾಗ ಸುಮ್ಮನಿರಲು ಸಾಧ್ಯವಿಲ್ಲ ಹಿಂದೂ ಸಮಾಜ ಗಟ್ಟಿಯಾಗದೆ ನಾವು ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಉದ್ಯಮಿ ಅಜಿತ್ ಚೌಟ, ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವಾಕರ ಪಂಬಂದಬೆಟ್ಟು, ಉದ್ಯಮಿ ಧನರಾಜ ಶೆಟ್ಟಿ ತೇವು, ಬಿಜೆಪಿ ಮಂಗಳೂರು ಮಂಡಲದ ಅಧ್ಯಕದಷ ಜಗದೀಶ ಆಳ್ವ ಕುವೆತ್ತಬೈಲ್, ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ದೇವಸ್ಯ ಪ್ರಕಾಶ್ಚಂದ್ರ ರೈ, ಅಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಆಡಳಿತ ಮೋಕ್ತೇಸರ ಭಾಸ್ಕರ ಚೌಟ, ಗುರಿಕಾರರಾದ ಕೆ. ಮೋನಪ್ಪ, ಕೆ. ವೆಂಕಪ್ಪ ಇದ್ದರು.

ಗೌರವಾಧ್ಯಕ್ಷ ಉಮೇಶ್ ಶೆಟ್ಟಿ ಬರ್ಕೆ ಸ್ವಾಗತಿಸಿದರು. ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಗಣಹೋಮ ನಡೆದು ೮ ಗಂಟೆಯ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಕಲಶಾಭಿಷೇಕ, ಪರ್ವಪೂಜೆ, ಮಹಾಪೂಜೆ ನಡೆಯಿತು.

Share this article