ಕನ್ನಡಪ್ರಭ ವಾರ್ತೆ ಮಂಗಳೂರು
ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ೨೨ನೇ ಪಂಚವಾರ್ಷಿಕ ಮತ್ತು ೪೩೨ನೇ ವಾರ್ಷಿಕ ಉರೂಸ್ ಸಮಾರಂಭ ಏ. ೨೪ರಿಂದ ಮೇ ೧೮ರ ವರೆಗೆ ದರ್ಗಾ ವಠಾರದಲ್ಲಿ ನಡೆಯಲಿದೆ.ಏ. ೨೪ರಂದು ಅಸರ್ ನಮಾಝ್ ಬಳಿಕ ವಾರ್ಷಿಕ ದ್ಸಿಕ್ರ್ ಹಾಗೂ ಉರೂಸ್ ಉದ್ಘಾಟನೆ ನಡೆಯಲಿದೆ. ದರ್ಗಾ ಝಿಯಾರತ್ ನೇತೃತ್ವವನ್ನು ಸಯ್ಯೀದ್ ಆಟಕೋಯ ತಂಙಳ್ ವಹಿಸಲಿದ್ದಾರೆ. ಖಾಝಿ ಸುಲ್ತಾನ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮವನ್ನು ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ದುಆ ನೆರವೇರಿಸಲಿದ್ದಾರೆ. ಸಯ್ಯಿದ್ ಅಲಿ ಬಾಫಕಿ ತಂಙಳ್, ಇಬ್ರಾಹಿಂ ಖಲೀಲ್ ತಂಙಳ್ ಕಡಲುಂಡಿ, ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಶರೀಯತ್ ಕಾಲೇಜು ಪ್ರಾಂಶುಪಾಲ ಪ್ರೊ. ಅಹ್ಮದ್ ಕುಟ್ಟಿ ಸಖಾಫಿ, ಅತ್ತಾವುಲ್ಲ ತಂಙಳ್ ಉದ್ಯಾವರ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ಜಮೀರ್ ಅಹಮ್ಮದ್, ಯೆನೆಪೋಯ ಅಬ್ದುಲ್ಲಾ ಕುಂಞಿ, ಬಿ.ಎಂ. ಫಾರೂಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಏ. ೨೫ರಿಂದ ಮೇ ೧೪ವರೆಗೆ ಸಂಜೆ ೭ರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಮುಖಂಡರಾದ ಕೂಟುಂಬಾರ ಅಬ್ದುಲ್ ರಹಿಮಾನ್ ದಾರಿಮಿ, ಅಬ್ದುಲ್ ರಶೀದ್ ಝೈನಿ, ಅಬ್ದುಲ್ ವಾಸಿಹ್ ಬಾಖವಿ, ಮೊಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ, ಹುಸೈನ್ ಸಖಾಫಿ ಚುಳ್ಳಿಕೋಡು, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮತ್ತಿತರ ಪಂಡಿತರು ಉಪನ್ಯಾಸ ನೀಡಲಿದ್ದಾರೆ. ಮೇ ೧೫ರಂದು ಅಲ್ ಕನಫ್ ಓಲ್ಡ್ ಸ್ಪೂಡೆಂಟ್ ಸಮ್ಮಿಟ್ ಸನದುದಾನ ಮಹಾ ಸಮ್ಮೇಳನ, ಧಾರ್ಮಿಕ ಉಪನ್ಯಾಸ ಸಮಾರೋಪ ನಡೆಯಲಿದೆ.ಮೇ 16ರಂದು ಸಿಎಂ ಆಗಮನ:ಮೇ ೧೬ರಂದು ಸಯ್ಯದ್ ಮದನಿ ಗ್ರ್ಯಾಂಡ್ ಮಸೀದಿಗೆ ಶಿಲಾನ್ಯಾಸ ನೆರವೇರಲಿದ್ದು, ಎಪಿ ಅಬೂಬಕ್ಕರ್ ಮುಸ್ಲಿಯಾರ್ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂದಿನ ಸಾಮಾಜಿಕ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಡಾ. ಜಿ. ಪರಮೇಶ್ವರ್, ಜಮೀರ್ ಅಹ್ಮದ್, ರಹೀಂ ಖಾನ್, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದರು. ಮೇ ೧೮ ರಂದು ನಡೆಯುವ ಅನ್ನದಾನದಲ್ಲಿ ಐದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ಮುಕ್ಕಚೇರಿ ಇದ್ದರು.