ಸಬ್‌ ಅರ್ಬನ್‌ ರೈಲು ಯೋಜನೆಗೆ 3 ಪ್ಯಾಕೇಜ್‌ಗಳಲ್ಲಿ ಮರು ಟೆಂಡರ್‌

KannadaprabhaNewsNetwork |  
Published : Nov 07, 2025, 04:15 AM ISTUpdated : Nov 07, 2025, 06:23 AM IST
Train

ಸಾರಾಂಶ

ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ನಡುವಿನ 25.01 ಕಿ.ಮೀ. ಮಲ್ಲಿಗೆ ಮಾರ್ಗದ (2ನೇ ಕಾರಿಡಾರ್‌) ಬಾಕಿ ಕಾಮಗಾರಿಗೆ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಹೊಸದಾಗಿ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿದೆ.

 ಬೆಂಗಳೂರು :  ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ನಡುವಿನ 25.01 ಕಿ.ಮೀ. ಮಲ್ಲಿಗೆ ಮಾರ್ಗದ (2ನೇ ಕಾರಿಡಾರ್‌) ಬಾಕಿ ಕಾಮಗಾರಿಗೆ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಹೊಸದಾಗಿ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿದೆ.

ಪ್ಯಾಕೇಜ್-1 7.795 ಕಿಮೀ ಉದ್ದದ ಎತ್ತರಿಸಿದ ಮಾರ್ಗ ವಿಭಾಗದ ವಿನ್ಯಾಸ ಮತ್ತು ನಿರ್ಮಾಣ ಒಳಗೊಂಡಿದೆ. ಬೆನ್ನಿಗಾನಹಳ್ಳಿ ಮತ್ತು ಶೆಟ್ಟಿಹಳ್ಳಿ ನಡುವೆ ಇರುವ ಎತ್ತರಿಸಿದ ವಯಡಕ್ಟ್‌ ಮತ್ತು ರ‍್ಯಾಂಪ್‌ಗಳನ್ನು ನಿರ್ಮಿಸಬೇಕಿದೆ. ಲೆವೆಲ್‌ 1ರಲ್ಲಿ ಬಿಬಿಎಂಪಿ ರಸ್ತೆ ಮೇಲ್ಸೇತುವೆ, ಲೆವೆಲ್ 2ರಲ್ಲಿ ಬಿ‌ಎಸ್‌ಆರ್‌‌ಪಿ ಹಳಿಗಳನ್ನು ಹೊಂದಿರುವ ಡಬಲ್ ಡೆಕ್ಕರ್ ವಯಡಕ್ಟ್‌ನ ವಿನ್ಯಾಸ ಮತ್ತು ನಿರ್ಮಾಣವೂ ಒಳಗೊಂಡಿದೆ.

ಲೊಟ್ಟೇಗೊಲ್ಲಹಳ್ಳಿ ಮತ್ತು ಯಶವಂತಪುರ ನಡುವಿನ 1.20 ಕಿಮೀ

ಲೊಟ್ಟೇಗೊಲ್ಲಹಳ್ಳಿ ಮತ್ತು ಯಶವಂತಪುರ ನಡುವಿನ 1.20 ಕಿಮೀ ಇದಾಗಿದೆ. ಅಲ್ಲದೇ ಮತ್ತಿಕೆರೆ ನಿಲ್ದಾಣ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳ ನಿರ್ಮಾಣವೂ ಸೇರಿದೆ. ಈ ಕಾಮಗಾರಿಯನ್ನು ಮುಗಿಸಲು 24 ತಿಂಗಳ ಗಡುವು ನಿಗದಿಪಡಿಸಲಾಗಿದೆ. ಪ್ಯಾಕೇಜ್ -2 ಬೆನ್ನಿಗಾನಹಳ್ಳಿ–ಬಾಣಸವಾಡಿ ಮತ್ತು ಬಾಣಸವಾಡಿ–ಹೆಬ್ಬಾಳ ನಡುವಿನ 11.569 ಕಿ.ಮೀ. ಅಟ್‌ಗ್ರೇಡ್‌ ವಿಭಾಗದ ವಿನ್ಯಾಸ ಮತ್ತು ನಿರ್ಮಾಣ ಕಾಮಗಾರಿ ಒಳಗೊಂಡಿದೆ. ನಾಗವಾರ ಮತ್ತು ಕನಕನಗರ ನಿಲ್ದಾಣಗಳ ಸ್ಟೇಷನ್ ಬಾಕ್ಸ್‌ಗಳ ನಿರ್ಮಾಣ ಸೇರಿದೆ. ಜತೆಗೆ ಕಾರಿಡಾರ್ -2 ರ ಪ್ರಮುಖ ಸೇತುವೆ, ಕಿರು ಸೇತುವೆ, ಆರ್‌ಯುಬಿ (ರೋಡ್ ಅಂಡರ್ ಬ್ರಿಡ್ಜ್), ಇಆರ್‌ಎಸ್/ರಿಟೇನಿಂಗ್ ವಾಲ್‌ ವಿನ್ಯಾಸ ಮತ್ತು ನಿರ್ಮಾಣವೂ ಈ ಪ್ಯಾಕೇಜ್‌ನಲ್ಲಿದೆ.

ಪ್ಯಾಕೇಜ್‌ -3 

ಯಶವಂತಪುರದಿಂದ ಚಿಕ್ಕಬಾಣಾವರದವರೆಗೆ 5.80 ಕಿ.ಮೀ ಉದ್ದದ ಅಟ್‌ಗ್ರೇಡ್‌ ವಿಭಾಗದ ವಿನ್ಯಾಸ ಮತ್ತು ನಿರ್ಮಾಣ ಕಾಮಗಾರಿ ಒಳಗೊಂಡಿದೆ. ಯಶವಂತಪುರ ಮತ್ತು ಚಿಕ್ಕಬಾಣವರ ನಡುವಿನ 185 ಮೀಟರ್ ಉದ್ದದ ಎತ್ತರಿಸಿದೆ ವಯಾಡಕ್ಟ್ ವಿಭಾಗದ ವಿನ್ಯಾಸ ಮತ್ತು ನಿರ್ಮಾಣವೂ ಸೇರಿದೆ. 2-3ನೇ ಪ್ಯಾಕೇಜ್‌ ಕಾಮಗಾರಿ ಮುಗಿಸಲು 18 ತಿಂಗಳ ಗಡುವು ನಿಗದಿಪಡಿಸಲಾಗಿದೆ.

ಕಾರಿಡಾರ್–2 ರ ಮೂರು ಪ್ಯಾಕೇಜು ಮೂಲಕ ಈ ಮಾರ್ಗದಲ್ಲಿರುವ 8 ಲೆವೆಲ್‌ ಕ್ರಾಸಿಂಗ್‌ಗಳು (ಎಲ್‌ಸಿ) ನಿವಾರಣೆಯಾಗಲಿವೆ ಎಂದು ಬಿಎಸ್‌ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯನ್ನು ಎಲ್‌ ಆ್ಯಂಡ್ ಟಿ ಕಂಪನಿ ಗುತ್ತಿಗೆ ಪಡೆದಿತ್ತು. ಕಳೆದ ಮಾರ್ಚ್‌ನಲ್ಲಿ ಈ ಕಂಪನಿ ಕಾಮಗಾರಿ ಸ್ಥಗಿತಗೊಳಿಸಿತ್ತು. ಗುತ್ತಿಗೆ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದು ಮಾಡಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಲು ಮರು ಟೆಂಡರ್‌ ಕರೆಯಲಾಗಿದೆ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಖಾಸಗಿ ಶಾಲೆಗಿಂತ ಅಂಗನವಾಡಿಯಲ್ಲಿ ಉತ್ತಮ ಶಿಕ್ಷಣ
ಲಕ್ಷ್ಮೇಶ್ವರದಲ್ಲಿ ಸಂಭ್ರಮದ ಅಗಸ್ತ್ಯ ತೀರ್ಥ ಜಾತ್ರಾ ಮಹೋತ್ಸವ