ಬಳ್ಳಾರಿ: ತರಗತಿಯಲ್ಲಿ ಎಷ್ಟು ಹೊತ್ತು ಸಮಯ ಕಳೆಯುತ್ತೀರಿ ಎಂಬುದು ಮುಖ್ಯವಲ್ಲ. ಎಷ್ಟು ಹೊತ್ತಿನ ತನಕ ಏಕಾಗ್ರತೆಯಿಂದ ಪಾಠ ಆಲಿಸಿ, ಮನನ ಮಾಡಿಕೊಳ್ಳುತ್ತೀರಿ ಎಂಬುದು ಅತ್ಯಂತ ಮುಖ್ಯ ಎಂದು ಎಸ್ಪಿ ಡಾ.ಶೋಭಾರಾಣಿ ವಿ.ಜೆ. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಅತ್ಯಂತ ಮುಖ್ಯ. ಸಮಯಕ್ಕೆ ಹೆಚ್ಚು ಮಹತ್ವ ನೀಡಿದರೆ ಮಾತ್ರ ನೀವು ಅಂದುಕೊಂಡಷ್ಟು ಫಲಿತಾಂಶ ಪಡೆಯಲು ಸಾಧ್ಯ. ಆಲಸಿಗಳಾದರೆ ಸಾಧನೆಯ ಶಿಖರ ಮುಟ್ಟಲು ಸುಲಭವಾಗುವುದಿಲ್ಲ. ನಿರಂತರ ಅಧ್ಯಯನ ಹಾಗೂ ಜ್ಞಾನಾರ್ಜನೆಯ ಗುರಿ ನಿಮ್ಮದಾಗಬೇಕು. ತರಗತಿಯಲ್ಲಿ ಮಾಡಿದ ಪಾಠವನ್ನು ಅಂದೇ ಮನನ ಮಾಡಿಕೊಳ್ಳಬೇಕು. ಪರೀಕ್ಷೆ ದಿನಗಳಲ್ಲಿ ಓದಿನ ಚಾಟ್ ಮಾಡಿಕೊಳ್ಳಬೇಕು. ಯಾವ ವಿಷಯ ಎಷ್ಟೊತ್ತು ಓದಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಬರೀ ಎಂಟು ವರ್ಷಗಳ ಕಾಲ ಶ್ರಮಪಟ್ಟರೆ ಸಾಕು, ಇಡೀ ಜೀವನ ಸುಖಮಯವಾಗಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಐಎಎಸ್, ಐಪಿಎಸ್ ಸೇರಿದಂತೆ ದೊಡ್ಡ ಹುದ್ದೆಗಳಲ್ಲಿರುವವರು ಗ್ರಾಮೀಣ ಭಾಗದಿಂದ ಹಾಗೂ ಸರ್ಕಾರಿ ಶಾಲೆಗಳಿಂದ ಬಂದವರಾಗಿದ್ದಾರೆ. ನಿರಂತರ ಓದಿನಿಂದ ಅನೇಕರು ತಾವು ಅಂದುಕೊಂಡಂತೆಯೇ ಆಗಿದ್ದಾರೆ. ಕಷ್ಟ ಪಡದೇ ಯಾರೂ ಸಾಧನೆ ಮಾಡಿದ ಉದಾಹರಣೆಗಳಿಲ್ಲ. ನೀವು ಅಂದುಕೊಂಡಂತಾಗಲು ಇರುವ ಏಕೈಕ ಸಾಧನವೆಂದರೆ ಅದು ಶಿಕ್ಷಣವಾಗಿದೆ. ಹೀಗಾಗಿ ಸದಾ ಓದಿನ ಕಡೆ ಗಮನ ನೀಡಿ. ಈ ರೀತಿಯ ಕಾರ್ಯಾಗಾರಗಳ ಸದುಪಯೋಗ ಮಾಡಿಕೊಳ್ಳಿ ಎಂದರು.ವಿಶ್ವಾಸದಿಂದ ಪರೀಕ್ಷೆ ಎದುರಿಸಿ:
ಕನ್ನಡಪ್ರಭ-ಸುವರ್ಣ ನ್ಯೂಸ್ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಜೊತೆಗೂಡಿ ಈ ರೀತಿಯ ಕಾರ್ಯಾಗಾರ ಹಮ್ಮಿಕೊಂಡಿರುವುದು ಹೆಚ್ಚು ಸಂತಸ ತಂದಿದೆ. ಸುದ್ದಿ ನೀಡುವ ಧಾವಂತದ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಮಾಧ್ಯಮ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯದ ನೆಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಸಾರ್ಥಕ ಕೆಲಸ ಮಾಡಿವೆ ಎಂದು ಶ್ಲಾಘಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಪುರುಷೋತ್ತಮ, ಎಚ್.ಹುಲೆಪ್ಪ, ಸಿದ್ಧಲಿಂಗೇಶ ಗದುಗಿನ
ತಾಲೂಕಿನ ಬಾಣಾಪುರ, ಹಿರೇ ಹಡ್ಲಿಗಿ, ಬಸರಕೋಡು, ಬೆಣಕಲ್, ಎಂ.ಗೋನಾಳ್, ಸಿಂಧುವಾಳ, ಯರಗುಡಿ, ಮೋಕಾ ಗುಡ್ ಶಫರ್ಡ್, ಮೋಕಾ ಹಾಗೂ ಯರಗುಡಿಯ ಮೊರಾರ್ಜಿ ದೇಸಾಯಿ ಪ್ರೌಢಶಾಲೆಗಳ ಸುಮಾರು 1250ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.