ಬಸವರಾಜ ಹಿರೇಮಠ
ಇಲ್ಲಿಯ ಕೋರ್ಟ್ ವೃತ್ತದ ಸಮೀಪದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಹೊರತುಪಡಿಸಿದರೆ ಧಾರವಾಡದ 2ನೇ ಅತಿ ದೊಡ್ಡ, ಓದುಗ ಸ್ನೇಹಿ ಗ್ರಂಥಾಲಯವು ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದೆ.
₹ 1.30 ಕೋಟಿ ವೆಚ್ಚದಲ್ಲಿ ನಾರಾಯಪುರದ ಲಯನ್ಸ್ ಶಾಲೆಯ ಎದುರು 3800 ಚದರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಎಲ್ಲವು ಅಂದಕೊಂಡಂತೆ ನಡೆದರೆ ಜುಲೈ ತಿಂಗಳಲ್ಲಿ ಗ್ರಂಥಾಲಯವು ವಿದ್ಯಾರ್ಥಿ ಓದುಗರಿಗೆ, ಸಾಹಿತ್ಯ ಓದುಗರಿಗೆ ಹಾಗೂ ಹಿರಿಯ ನಾಗರಿಕರಿಗೆ ಮುಕ್ತವಾಗಲಿದೆ.ಆಧುನಿಕ ಸಂದರ್ಭದಲ್ಲಿ ಮೊಬೈಲ್, ಕಂಪ್ಯೂಟರ್ ಮೂಲಕ ಗೂಗಲ್ ಹುಡುಕಿ ಎಂತಹ ಮಾಹಿತಿ ಹೊರತೆಗೆದರೂ ಜ್ಞಾನವನ್ನು ಸಂಪಾದಿಸಲು ಗ್ರಂಥಗಳು, ಗ್ರಂಥಾಲಯಗಳು ಅಗತ್ಯವಾಗಿ ಬೇಕು. ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು ಎನ್ನುತ್ತಾರೆ. ಓದಲು ಬರುವವರಿಗೆ ಗ್ರಂಥಾಲಯಗಳು ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷರದ ಭಂಡಾರಗಳು. ಅಂತಹ ಗ್ರಂಥಾಲಯಗಳು ಧಾರವಾಡದಲ್ಲಿ ಸಾಕಷ್ಟಿದ್ದರೂ ಸುಸಜ್ಜಿತವಾಗಿಲ್ಲ. ಇತ್ತೀಚೆಗೆ ಗ್ರಂಥಾಲಯ ಇಲಾಖೆ ಒಂದೊಂದಾಗಿ ತನ್ನ ಗಂಥಾಲಯಗಳಿಗೆ ಆಧುನಿಕ ಹಾಗೂ ಓದುಗ ಸ್ನೇಹಿ ರೂಪ ನೀಡುತ್ತಿದೆ. ಇದರ ಭಾಗವಾಗಿ ನಾರಾಯಣಪುರದಲ್ಲಿ ಸುಸಜ್ಜಿತ ಗ್ರಂಥಾಲಯ ಸಿದ್ಧಗೊಂಡಿದೆ.
ನಾರಾಯಣಪುರ ನೂತನ ಗ್ರಂಥಾಲಯ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಕೇಂದ್ರದ ಉಪ ನಿರ್ದೇಶಕ ರಾಮಯ್ಯ, ನಿರ್ಮಿತಿ ಕೇಂದ್ರದಿಂದ ₹ 1.30 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದ್ದು ₹16 ಲಕ್ಷ ವೆಚ್ಚದಲ್ಲಿ ಪೀಠೋಪಕರಣ ಸಿದ್ಧಗೊಳಿಸಲಾಗುತ್ತಿದೆ. ಎರಡು ಅಂತಸ್ತಿನ ವಿಶಾಲವಾದ ಕಟ್ಟಡದಲ್ಲಿ ಗಾಳಿ, ಬೆಳಕಿನೊಂದಿಗೆ 100 ಜನ ಸಮಾಧಾನದಿಂದ ಕೂತು ಓದಲು ಕುರ್ಚಿ, ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಮೊದಲು ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯವಿದ್ದು ಅಲ್ಲಿನ 40 ಸಾವಿರ ಗ್ರಂಥಗಳನ್ನು ಹೊಸ ಕಟ್ಟಡಕ್ಕೆ ಹಸ್ತಾಂತರಿಸಿದ್ದು, ಹಂತ ಹಂತವಾಗಿ ಹೆಚ್ಚಿನ ಗ್ರಂಥಗಳನ್ನು ಓದುಗರಿಗೆ ಒದಗಿಸಲು ಗ್ರಂಥಾಲಯ ಇಲಾಖೆ ಯೋಜನೆ ರೂಪಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಸಾಮಾನ್ಯ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತಿಗಳಿಗೆ ಓದಲು ಈ ಕಟ್ಟಡಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಂಥ ಹೊರತುಪಡಿಸಿ ಕಂಪ್ಯೂಟರ್ ಮೂಲಕವೂ ಜ್ಞಾನ ಹೆಚ್ಚಿಸಿಕೊಳ್ಳಲು, ನೌಕರಿಗೆ ಅರ್ಜಿ ಹಾಕಲು ಕಂಪ್ಯೂಟರ್, ಇಂಟರನೆಟ್ ವ್ಯವಸ್ಥೆಯನ್ನು ನಗರ ಕೇಂದ್ರ ಗ್ರಂಥಾಲಯದಲ್ಲಿ ಮಾಡಲಾಗಿದ್ದು 11 ಲಕ್ಷ ಗ್ರಂಥಗಳನ್ನು ಹೊಂದಿದೆ. ಏಕಕಾಲಕ್ಕೆ ಸಾವಿರ ಜನರು ಓದಲು ಸ್ಥಳಾವಕಾಶ ಇದ್ದು, ಇದೇ ರೀತಿಯಲ್ಲಿ ಇತರೆ ಗ್ರಂಥಾಲಯಗಳನ್ನು ನಿರ್ಮಿಸುವುದು ನಮ್ಮ ಆಶಯ ಎಂದು ರಾಮಯ್ಯ ತಿಳಿಸಿದರು.