ಹೊನ್ನಾವರ: ಮನುಷ್ಯನ ಜೀವನಾನುಭವಗಳು ಬರಹಗಳಾಗಿ ಹರಳುಗಟ್ಟುತ್ತವೆ. 120ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಎಲ್.ಎಸ್. ಶಾಸ್ತ್ರಿ ಬೆಳಗಾವಿಯಲ್ಲಿ ಅನೇಕ ಸಂಘ-ಸಂಸ್ಥೆಗಳನ್ನು ಕಟ್ಟಿ, ಸಾವಿರಾರು ಕಾರ್ಯಕ್ರಮಗಳನ್ನು ಸಂಘಟಿಸಿ, ಹೊಸಬರ ಪ್ರತಿಭೆಯ ವಿಕಸನಕ್ಕೆ ವೇದಿಕೆ ಕಲ್ಪಿಸಿ ಮಾದರಿಯಾಗಿದ್ದಾರೆ ಎಂದು ಕೃಷ್ಣಮೂರ್ತಿ ಹೆಬ್ಬಾರ್ ಹೇಳಿದರು.
ಚಿಂತಕ ನಾರಾಯಣ ಯಾಜಿ ಸಾಲೇಬೈಲು ಮತ್ತು ಉಪನ್ಯಾಸಕ ಪ್ರಶಾಂತ್ ಮೂಡಲಮನೆ ಬಿಡುಗಡೆಗೊಂಡ ಕೃತಿಗಳ ಕುರಿತು ಪರಿಚಯಾತ್ಮಕ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ ಅಪಗಾಲ ಅವರು ಶಾಸ್ತ್ರಿ ಅವರು ಬರೆದ ಕೃ.ಶಿ. ಹೆಗಡೆ ಜೀವನ ಚರಿತ್ರೆ ಕೃತಿಯನ್ನು ಅವಲೋಕನ ಮಾಡಿದರು.
ಕೃತಿಕಾರ ಎಲ್.ಎಸ್. ಶಾಸ್ತ್ರಿ ಮಾತನಾಡಿ, ಕೇವಲ ಬರೆದರೆ ಪ್ರಯೋಜನವಿಲ್ಲ. ಓದಿ ಬರೆಯಬೇಕು. ಮಸ್ತಕ ತುಂಬಲು ಪುಸ್ತಕದ ಓದು ಸಹಕಾರಿ. ಕಿರಿಯರು ಹಿರಿಯರ ಕೃತಿಗಳನ್ನು ಓದಿ ಅನುಭವ ಪಡೆಯಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಸಂಘದ ಪರವಾಗಿ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.ಹಿರಿಯ ಸಾಹಿತಿ ಹೊನ್ನಪ್ಪಯ್ಯ ಗುನಗಾ ಅವರು ಶಾಸ್ತ್ರೀಯವರ ಉದಾರತೆ ಮತ್ತು ಸಹಕಾರದ ಮನೋಧರ್ಮವನ್ನು ಶ್ಲಾಘಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾಗ್ಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾಧರ ಕಡತೋಕಾ ಕಾರ್ಯಕ್ರಮ ನಿರೂಪಿಸಿದರು.