ತಂತ್ರಜ್ಞಾನಕ್ಕಿಂತ ಓದು ಮಹತ್ವದ್ದು: ಸುನಿಲ್ ಕುಮಾರ್

KannadaprabhaNewsNetwork |  
Published : Jul 21, 2026, 02:45 AM IST
ಪುಸ್ತಕ | Kannada Prabha

ಸಾರಾಂಶ

ಚಾಟ್‌ಜಿಪಿಟಿ ಅಥವಾ ಗೂಗಲ್‌ನಿಂದ ಬದುಕು ರೂಪುಗೊಂಡಿಲ್ಲ. ಪುಸ್ತಕಗಳೇ ಬದುಕನ್ನು ರೂಪಿಸಿವೆ. ಇಂದಿನ ಯುಗದಲ್ಲಿ ತಂತ್ರಜ್ಞಾನ ಯುದ್ಧಗಳನ್ನು ಗೆಲ್ಲಿಸಬಹುದು. ಪುಸ್ತಕಗಳು ಮೌಲ್ಯಯುತವಾದ ಓದು, ಅನುಭವ ಮತ್ತು ಜೀವನದ ದಾರಿ ದೀಪವನ್ನು ನೀಡುತ್ತವೆ. ಆದ್ದರಿಂದ ಪುಸ್ತಕಗಳ ಮೊರೆ ಹೋಗುವ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ: ಚಾಟ್‌ಜಿಪಿಟಿ ಅಥವಾ ಗೂಗಲ್‌ನಿಂದ ಬದುಕು ರೂಪುಗೊಂಡಿಲ್ಲ. ಪುಸ್ತಕಗಳೇ ಬದುಕನ್ನು ರೂಪಿಸಿವೆ. ಇಂದಿನ ಯುಗದಲ್ಲಿ ತಂತ್ರಜ್ಞಾನ ಯುದ್ಧಗಳನ್ನು ಗೆಲ್ಲಿಸಬಹುದು. ಪುಸ್ತಕಗಳು ಮೌಲ್ಯಯುತವಾದ ಓದು, ಅನುಭವ ಮತ್ತು ಜೀವನದ ದಾರಿ ದೀಪವನ್ನು ನೀಡುತ್ತವೆ. ಆದ್ದರಿಂದ ಪುಸ್ತಕಗಳ ಮೊರೆ ಹೋಗುವ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಭಾನುವಾರ ಆಯೋಜಿಸಲಾದ ‘ಪುಸ್ತಕಧಾರೆ–3’ ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.ಪುಸ್ತಕಗಳು ಮೌನವಾಗಿ ಮಾತನಾಡುತ್ತವೆ. ಅವುಗಳ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಶ್ವತವಾದ ಪುಸ್ತಕಗಳು ಸಮಾಜಕ್ಕೆ ಬೆಳಕಾಗಬೇಕು ಎಂದರು.

25 ಕೃತಿಗಳನ್ನು ಅನಾವರಣಗೊಳಿಸಿ ಮಾತನಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್, ಪಿಯುಸಿ ಹಂತದಲ್ಲೇ ಸಾಹಿತ್ಯದ ಲೋಕವನ್ನು ವಿದ್ಯಾರ್ಥಿಗಳಿಗೆ ತೆರೆದಿಡುವ ಕಾರ್ಯವನ್ನು ಕ್ರಿಯೇಟಿವ್ ಕಾಲೇಜು ಮಾಡುತ್ತಿರುವುದು ಶ್ಲಾಘನೀಯ ಎಂದರು.ಇಂದಿನ ಕಾಲದಲ್ಲಿ ಮೊಬೈಲ್ ಬೆಂಕಿ ಪೊಟ್ಟಣದಂತಿದೆ. ಅದನ್ನು ಸರಿಯಾಗಿ ಬಳಸಿದರೆ ಮನೆಯನ್ನು ಬೆಳಗಿಸುತ್ತದೆ. ತಪ್ಪಾಗಿ ಬಳಸಿದರೆ ಅದೇ ಮನೆಯನ್ನು ಚಿತೆಯನ್ನಾಗಿಸಬಹುದು. ಶಿಕ್ಷಣವು ಸಾವಿರಾರು ವರ್ಷಗಳಿಂದ ಅನುಕರಣೆ ಮೂಲಕ ಬೆಳೆಯುತ್ತಾ ಬಂದಿದೆ. ಶಿಕ್ಷಣ ಎಂದರೆ ಕೇವಲ ಉದ್ಯೋಗವಲ್ಲ. ನಮಗೆ ದೊರೆತಿರುವ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳುದು ಎಂದರು. ಟಿ.ಎಂ.ಎ. ಪೈ ಶಿಕ್ಷಣ ಸಂಸ್ಥೆ, ಉಡುಪಿಯ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ಕ್ರಿಯೇಟಿವ್ ಪುಸ್ತಕಮನೆ ಸಾಹಿತ್ಯವನ್ನು ಸೃಜನಾತ್ಮಕವಾಗಿ ಜನರಿಗೆ ತಲುಪಿಸುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಮಾತನಾಡಿ, ಕರಾವಳಿ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಶ್ವತ್ ಎಸ್.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾವಂತ ಸಾಹಿತ್ಯದ ಪುಟಗಳು ಇಂದು ಓದುಗರ ಹೃದಯದ ಬಾಗಿಲು ತಟ್ಟುತ್ತಿವೆ. ಪ್ರಕಟಣೆಯ ಕಿರಣಗಳು ಅನೇಕ ವಿನೂತನ ಆಲೋಚನೆಗಳಿಗೆ ಜೀವ ತುಂಬುತ್ತಿವೆ. ಈಗಾಗಲೇ ಪುಸ್ತಕ ಮನೆ ಮೂಲಕ ರಾಜ್ಯದಾದ್ಯಂತ 104 ಕೃತಿಗಳನ್ನು ಪ್ರಕಟಿಸಿ, ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಜ್ಞಾನದ ಬೆಳಕು ಹರಿಸಲಾಗಿದೆ ಎಂದು ಹೇಳಿದರು.ವಿದ್ವಾನ್ ಗಣಪತಿ ಭಟ್ ಮಾತನಾಡಿ, ಸಾಹಿತ್ಯವೆಂಬುದು ಬದುಕಿನ ರಹದಾರಿ ಯಾಗಿದೆ ಎಂದರು. ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಸುಬ್ರಹ್ಮಣ್ಯ ಸಿ. ಅವರ ‘ಹೊಸಪಟ್ಟಣ’, ಡಾ. ಮಹಾಬಲೇಶ್ವರ ರಾವ್ ಅವರ ‘ಖ್ಯಾತ ಶಿಕ್ಷಣ ಸಿದ್ಧಾಂತಿಗಳು’, ಶ್ರೀಧರ ಗೋರೆ ಅವರ ‘ಪಿಯೂಷಾಮೃತ’ ಹಾಗೂ ‘ಸುಭಾಷಿತ ಸಾಗರ’, ಮೇದಿನಿ ಕೆಸಬಿನಮನೆ ಅವರ ‘ಬದುಕಿನ ಕನ್ನಡಿಯಲಿ’, ಚಂದ್ರಕಾಂತ ಪೋಕಳ ಅವರ ‘ಭಾವಮುದ್ರೆ’, ನವೀನ ಕೃಷ್ಣ ಎಸ್. ಅವರ ‘ದೇವಯಾನ’, ಗಿರೀಶ್ ಮೆವುಂಡಿ ಅವರ ‘ತರ್ಕಕ್ಕೆ ನಿಲುಕದ್ದು’, ನಾಗರಾಜ ಬಾರ್ವಿ ಕಂಜುಗೋಡು ಅವರ ‘ಸಮುದ್ರ ಮಾತಾಡಿತು’, ಮಾಲಾ ಎಂ. ಅಕ್ಷಿಶೆಟ್ಟಿ ಅವರ ‘ನಿತ್ಯದ ನೋಟಗಳಿಗೆ ನಿರುತ್ತರ’, ಮನು ಗುರುಸ್ವಾಮಿ ಅವರ ‘ಅಪ್ಪನ ಅಂಗಡಿ’, ಲಕ್ಷ್ಮೀಕಾಂತ್ ಆರ್. ಅವರ ‘ಚಿಗುರು ಚಿವುಟಿದ ಫೇಸ್‌ಬುಕ್’, ಪ್ರಜ್ವಲಾ ಶೆಟ್ಟಿ ಅವರ ‘ಗೆಲುವಿನ ದಾರಿ’, ಕೆ. ರಾಜಲಕ್ಷ್ಮೀ ಅವರ ‘ನದಿಯಂಚಿನ ನಡಿಗೆ’, ಹರೀಶ್ ಟಿ.ಜಿ, ಅವರ ‘ಚಂದನವ ಕಡಿದು ತೋದೊಡೆ’, ಜನಾರ್ದನ ಭಟ್ ಅವರ ‘ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು’, ಮಧುಕರ್ ಬಳ್ಯೂರು ಅವರ ‘ಮೌನ ಈ ಮಳೆ ಬಿಲ್ಲು’, ವಾಣಿರಾಜ್ ಅವರ ‘ನಂಬಿಕೆ’, ಶುಭಲಕ್ಷ್ಮೀ ಆರ್. ನಾಯಕ್ ಅವರ ‘ಗೆಲುವಿನ ಏಣಿ’, ಡಾ. ಸುಮತಿ ಪಿ. ಅವರ ‘ಅಂತರಂಗ ಯಾನ’, ಲಕ್ಷ್ಮೀ ಜಿ. ಭಟ್ ಅವರ ‘ಮೌಲ್ಯದರಿವಿನ ಹೊಂಬೆಳಕು’, ಸದಾಶಿವ ಸೂರಟೂರು ಅವರ ‘ನೀಲಿ’, ಶ್ಯಾಮಲಾ ಗೋಪಿನಾಥ್ ಅವರ ‘ಒಲವೇ ಹಾಡಾಗಿದೆ’, ತ್ರಿವೇಣಿ ಅವರ ‘ಸಾಹಿತ್ಯ ವಿಸ್ಮಯ’ ಹಾಗೂ ಅನುಬೆಳ್ಳ ಅವರ ‘ರಣರಂಗ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.‌

ಕಾಲೇಜಿನ ಸಂಸ್ಥಾಪಕ ಅಮೃತ್ ರೈ, ಗಣಪತಿ ಭಟ್, ಗಣನಾಥ್ ಶೆಟ್ಟಿ, ಆದರ್ಶ ಎಂ.ಕೆ., ವಿದ್ವಾನ್ ಗಣಪತಿ ಭಟ್, ವಿಮಲ್ ರಾಜ್, ಗಣಪತಿ‌ ಕೆ.ಎಸ್. ಉಪಸ್ಥಿತರಿದ್ದರು.ರಾಜ್ಯ ಮಟ್ಟದ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿಯನ್ನು ಕುಂದಾಪುರದ ಲೇಖಕ ಶಶಿಧರ ಹಾಲಾಡಿ ಅವರ ‘ನದಿದಾಟಿ ಬಂದವರು’ ಕೃತಿಗೆ ಪ್ರದಾನ ಮಾಡಲಾಯಿತು. ಉಪನ್ಯಾಸಕ ಲೋಹಿತ್ ನಿರೂಪಿಸಿದರು.

ವೃತ್ತಿ ವೃತ್ತಿಯಾಗಿಸಿದರೆ ಜೀವನ ಅದ್ಭುತ: ಅಜಿತ್

ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ‘ಸಾಹಿತ್ಯ ಸಾಂಗತ್ಯ’ ಸಂವಾದ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ, ‘ದುಡ್ಡು ಗಳಿಸುವುದೇ ಜೀವನದ ಗುರಿಯಾಗಬಾರದು. ವೃತ್ತಿ ಮತ್ತು ಪ್ರವೃತ್ತಿ ಒಂದಾದರೆ ಜೀವನ ಅದ್ಭುತವಾಗಿರುತ್ತದೆ ಎಂದರು.ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ವೇಗವಾಗಿ ಹರಡುತ್ತಿದ್ದರೂ, ಅದರ ಸತ್ಯಾಸತ್ಯತೆ ತಿಳಿಯಲು ಜನರು ಇನ್ನೂ ದೂರದರ್ಶನ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳನ್ನು ಅವಲಂಬಿಸುತ್ತಿದ್ದಾರೆ ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಶ್ವತ್ ಎಸ್.ಎಲ್. ಉಪಸ್ಥಿತರಿದ್ದು, ಅವಿನಾಶ್ ಕಾಮತ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈ ಕೊನೆಯ ವಾರ ‘ರಾಷ್ಟ್ರೀಯ ಪತಂಗ ಸಪ್ತಾಹ’
ಸಿದ್ದಾಪುರ: ಪೊಲೀಸರಿಂದ ರಸ್ತೆ ಸುರಕ್ಷತೆ ಜಾಗೃತಿ