ಕನ್ನಡಪ್ರಭ ವಾರ್ತೆ ಚಾಮರಾಜನಗರಹೈಕೋರ್ಟ್ ಆದೇಶದಂತೆ ಉಮ್ಮತ್ತೂರು ಶ್ರೀ ಉರುಕಾತೇಶ್ವರಿ ದೇವಸ್ಥಾನದ ಬೀಗದ ಕೈ ಹಾಗೂ ಬ್ಯಾಂಕ್ ಖಾತೆಯನ್ನು ನಿರ್ವಹಿಸುವ ಅಧಿಕಾರವನ್ನು ತಾಲೂಕು ಆಡಳಿತ ನೀಡದಿದ್ದರೆ ಮಂಗಳವಾರ ನ್ಯಾಯಾಲಯದ ಆದೇಶದಂತೆ ದೇವಸ್ಥಾನ ಬೀಗ ಹೊಡೆದು ಪೂಜೆ ಸಲ್ಲಿಸುವುದಾಗಿ ಶ್ರೀ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನ ಮಂಡಳಿ ಅಧ್ಯಕ್ಷ ಎಸ್. ಗುರುಮಲ್ಲಪ್ಪ ಎಚ್ಚರಿಸಿದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೋರೆ ಹೋಗಿದ್ದು, ನ್ಯಾಯಾಲಯವು ಸದರಿ ರಿಟ್ ಪಿಟಿಷನ್ ಸಂಖ್ಯೆ ಡಬ್ಲ್ಯೂಪಿ ೬೯೫೬/೨೦೨೨ ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ವಾದವಿವಾದ ಆಲಿಸಿ ಅಂತಿಮವಾಗಿ ೨೦೨೪ ಜ.೧೮ ರಂದು ಆದೇಶ ಹೊರಡಿಸಿ, ಮುಜರಾಯಿ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶವನ್ನು ರದ್ದುಪಡಿಸಿದೆ. ನ್ಯಾಯಾಧೀಶರ ಆದೇಶದಂತೆ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನ ಮಂಡಳಿಗೆ ಹಸ್ತಾಂತರ ಮಾಡಬೇಕು ಎಂದು ಗುರುಮಲ್ಲಪ್ಪ ತಿಳಿಸಿದರು.
ಉಚ್ಛ ನ್ಯಾಯಾಲಯವು ದೇವಸ್ಥಾನ ಕೀಲಿಕೈ, ಸಂಗ್ರಹವಾಗಿರುವ ಕಾಣಿಕೆ, ಹುಂಡಿ ಹಣ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಇನ್ನಿತರ ವಸ್ತುಗಳನ್ನು ಹಾಗೂ ದೇವಸ್ಥಾನದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಟ್ರಸ್ಟ್ ನವರಿಗೆ ನೀಡಬೇಕೆಂದು ಆದೇಶವಾಗಿದೆ. ಅದರಂತೆ ಈಗಾಗಲೇ ಟ್ರಸ್ಟ್ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ನ್ಯಾಯಾಲಯದ ಅದೇಶ ಪ್ರತಿಯೊಂದಿಗೆ ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿ ಹಾಗೂ ಹೈಕೋರ್ಟ್ ಅದೇಶದಂತೆ ಎಡಿಸಿ ಜ.೨೯ ರಂದೇ ತಹಸೀಲ್ದಾರ್‌ಗೆ ಪತ್ರ ಬರೆದು ಉಮ್ಮತ್ತೂರು ದೇವಸ್ಥಾನದ ಕೀಲಿಕೈ, ದೇವಸ್ಥಾನ ಬ್ಯಾಂಕ್ ಖಾತೆಯನ್ನು ನಿರ್ವಹಿಸಲು ಟ್ರಸ್ಟ್ವನವರಿಗೆ ನೀಡುವಂತೆ ತಹಸೀಲ್ದಾರ್‌ಗೆ ಸೂಚನೆ ಕೊಟ್ಟಿದ್ದಾರೆ ಎಂದರು.ಆದರೆ, ತಹಸೀಲ್ದಾರ್ ಹೈಕೋರ್ಟ್ ಆದೇಶದಂತೆ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯನ್ನು ಟ್ರಸ್ಟ್ ಪದಾಧಿಕಾರಿಗಳಿಗೆ ವಹಿಸಬೇಕಾಗಿತ್ತು. ಆದರೆ, ಇದುವರೆಗೆ ಮೀನಮೇಷ ಎಣಿಸುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇನ್ನು ಮೂರು ದಿನಗಳ ಅವಧಿಯಲ್ಲಿ ದೇವಸ್ಥಾನದ ಸಂಪ್ರದಾಯದಂತೆ ಪ್ರತಿ ತಿಂಗಳ ಮೊದಲ ಮಂಗಳವಾರ ದೇವಸ್ಥಾನದ ಬಾಗಿಲು ತೆರೆದು ಪೂಜೆ ಸಲ್ಲಿಸಿ, ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. ಈ ಎಲ್ಲಾ ಪ್ರಕ್ರಿಯೆಯು ಹೈಕೋರ್ಟ್ ಆದೇಶದಂತೆ ಟ್ರಸ್ಟ್ ನಡೆಸಬೇಕಾಗಿದೆ. ಹೀಗಾಗಿ ತಹಸೀಲ್ದಾರ್ ತಕ್ಷಣ ಬೀಗ ನೀಡಿ, ದೇವಸ್ಥಾನದ ಸಂಪೂರ್ಣ ಹೊಣೆಗಾರಿಕೆಯನ್ನು ಟ್ರಸ್ಟ್ ಅಧ್ಯಕ್ಷರಿಗೆ ಹಸ್ತಾಂತರ ಮಾಡಬೇಕು. ಇಲ್ಲದಿದ್ದರೆ ಮಂಗಳವಾರ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೇವಸ್ಥಾನದ ಬೀಗ ಹೊಡೆಯಬೇಕಾಗುತ್ತದೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ತಹಸೀಲ್ದಾರ್ ನೇರ ಹೊಣೆಗಾರರಾಗುತ್ತಾರೆ ಎಂದು ಎಸ್. ಗುರುಮಲ್ಲಪ್ಪ ಎಚ್ಚರಿಸಿದರು.