ನನ್ನ ಅವಧಿಯ ಕಾಮಗಾರಿಯ ಸಂಪೂರ್ಣ ಲೆಕ್ಕ ಕೊಡಲು ಸಿದ್ಧ: ಶಾಸಕ ನಂಜೇಗೌಡ ಸವಾಲು

KannadaprabhaNewsNetwork |  
Published : Oct 22, 2026, 01:30 AM IST
ಶಿರ್ಷಿಕೆ-೨೦ಕೆ.ಎಂ.ಎಲ್.ಆರ್.೧-ಮಾಲೂರು ತಾಲೂಕಿನ ಸಂಪಂಗೆರೆ ಯಲ್ಲಿ ವಿವಿಧ ಪಕ್ಷಗಳ ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ  ಕಾರ್ಯಕ್ರಮದಲ್ಲಿ ಶಾಸಕ ನಂಜೇಗೌಡ ಮಾತನಾಡಿದರು. | Kannada Prabha

ಸಾರಾಂಶ

ನರಸಾಪುರದಿಂದ ಸಂಪಂಗೆರೆವರೆಗೆ ಸುಮಾರು ₹೯೦೦ ಕೋಟಿ ವೆಚ್ಚದಲ್ಲಿ ನಾಲ್ಕು ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭದಲ್ಲಿ ವಿಳಂಬವಾಗಿರುವ ಹಿನ್ನೆಲೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ,ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಮಾಲೂರು

ನಾನು ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರದಲ್ಲಿ ₹೩,೨೦೦ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳ ಸಂಪೂರ್ಣ ಲೆಕ್ಕ ಕೊಡಲು ಸಿದ್ಧನಾಗಿದ್ದೇನೆ. ಸದಾ ಅಪಾದನೆ ಮಾಡುವ ಮಾಜಿ ಶಾಸಕರು ತಮ್ಮ ಕಾಲದ ಅಭಿವೃದ್ಧಿಯ ಪಟ್ಟಿ ಹಾಗೂ ಲೆಕ್ಕ ಕೂಡಲು ಸಾಧ್ಯವೇ ಎಂದು ಶಾಸಕ ಕೆ.ವೈ.ನಂಜೇಗೌಡ ಪ್ರಶ್ನಿಸಿದರು.

ಅವರು ತಾಲೂಕಿನ ಸಂಪಂಗೆರೆ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಮುಖಂಡರುಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ಹಿಂದೆಂದೂ ಇಲ್ಲದಂತಹ ಅಭಿವೃದ್ಧಿ ಕಾಮಗಾರಿಗಳು ತಾಲೂಕಿನಲ್ಲಿ ಕಣ್ಣಿಗೆ ಕಾಣುವ ಹಾಗೆ ನಡೆಯುತ್ತಿವೆ. ಪಟ್ಟಣದಲ್ಲಿನ ಮೇಲ್ಸೇತುವೆ, ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡ, ಅತ್ಯಾಧುನಿಕ ಸೌಕರ್ಯವುಳ್ಳ ಬಸ್ ನಿಲ್ದಾಣ, ಹೊಸಕೋಟೆವರೆಗಿನ ೩೦ ಕಿಮೀ ಉದ್ದದ ನಾಲ್ಕು ಪಥದ ರಸ್ತೆ ಹಾಗೂ ಪಟ್ಟಣದ ದೊಡ್ಡಕೆರೆ ಅಭಿವೃದ್ಧಿ ಸೇರಿ ₹3,200 ಕೋಟಿ ಕಾಮಗಾರಿಗಳು ಚಾಲನೆಯಲ್ಲಿವೆ. ಚಿಕ್ಕ ತಿರುಪತಿ ದೇವಾಲಯ ಅಭಿವೃದ್ಧಿ , ಮಾಸ್ತಿಯಲ್ಲಿ ₹೨೫ ಕೋಟಿ ವೆಚ್ಚದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆ, ಟೇಕಲ್ ನಲ್ಲಿ ೩೮ ಎಕರೆ ಪ್ರದೇಶದಲ್ಲಿ ನಾಡಕಚೇರಿ, ಕಾರ್ಮಿಕರ ವಸತಿ ಶಾಲೆ, ಐಟಿಐ ಕಾಲೇಜು ಕಟ್ಟಡ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದ ಶಾಸಕರು, ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಅರ್ಥ ಇಲ್ಲ. ತಾಲೂಕಿನಲ್ಲಿ ನಡೆದಿರುವ ಕಾಮಗಾರಿಗಳ ಪಟ್ಟಿ ಹಾಗೂ ಯೋಜನೆಯ ಸಂಪೂರ್ಣ ಮಾಹಿತಿ ನೀಡುತ್ತೇನೆ. ನೀವು ನಿಮ್ಮ ಕಾಲದಲ್ಲಿ ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಲು ಸಿದ್ಧವೇ ಎಂದು ಪ್ರಶ್ನಿಸಿದರು.

ಸಂಪೂರ್ಣ ಹಾಳಾಗಿರುವ ಹೊಸೂರು ರಸ್ತೆಯ ವಾಸ್ತವ ಸ್ಥಿತಿಯ ಬಗ್ಗೆ ಮಾತನಾಡುತ್ತ, ನರಸಾಪುರದಿಂದ ಸಂಪಂಗೆರೆವರೆಗೆ ಸುಮಾರು ₹೯೦೦ ಕೋಟಿ ವೆಚ್ಚದಲ್ಲಿ ನಾಲ್ಕು ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭದಲ್ಲಿ ವಿಳಂಬವಾಗಿರುವ ಹಿನ್ನೆಲೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ,ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದರು.

ಮುಂಬರಲಿರುವ ಪಂಚಾಯ್ತಿ ಚುನಾವಣೆಗಳು ಕಾರ್ಯಕರ್ತರನ್ನು ಮುಖಂಡರುಗಳನ್ನಾಗಿ ಮಾಡುವ ಚುನಾವಣೆಗಳಾಗಿದ್ದು, ಪಕ್ಷ ಸಂಘಟನೆ, ಒಗ್ಗಟ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ವ್ಯಾಪ್ತಿ ಜಿಪಂಯು ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಯಾಗಿರುವ ಹಿನ್ನೆಲೆ ತಾಪಂ ಮಾಜಿ ಅಧ್ಯಕ್ಷ ಮುನಿರಾಜು ಅವರ ಪತ್ನಿ ಹೇಮಾವತಿ ಆಕಾಂಕ್ಷಿಯಾಗಿದ್ದು, ಈ ಬಗ್ಗೆ ಪಕ್ಷದ ಮುಖಂಡರು , ಕಾರ್ಯಕರ್ತರ ಅಭಿಪ್ರಾಯ ಪಡೆದು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರುಗಳನ್ನು ಶಾಸಕ ನಂಜೇಗೌಡರು ಹೂವಿನ ಹಾರ ಹಾಕಿ ಬರಮಾಡಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕೃಷ್ಣಪ್ಪ ,ರಾಮಮೂರ್ತಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ನಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ವಿ.ಮುನಿರಾಜು , ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್ ,ವಿ.ನಾಗೇಶ್ , ಹೇಮಾವತಿ ಮುನಿರಾಜು , ವಿನಯ್ ಕುಮಾರ್ ,ಎಟ್ಟುಕೋಡಿ ವೆಂಕಟೇಶ್ ,ಚಿಕ್ಕ ತಿರುಪತಿ ರಾಘವೇಂದ್ರ ಇನ್ನಿತರರು ಇದ್ದರು.

-------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಸುಸೂತ್ರವಿರಲು ಸದಸ್ಯರಲ್ಲಿ ಬಾಂಧವ್ಯ ಮುಖ್ಯ
ಬಾಲಕೃಷ್ಣ ಸಚಿವರಾದ ಬಳಿಕ ಕ್ಷೇತ್ರಕ್ಕೆ ಹೆಚ್ಚು ಅನುದಾನ