ಸುಳ್ಳಾದರೆ ಆರೋಪಿಸುವವರು ಕತ್ತೆ ಮೇಲೆ ಮೆರವಣಿಗೆ ಸಿದ್ಧವಾಗಿದ್ದಾರೆಯೇ ಸವಾಲು
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಧರಣೀಶ್ ಪರ ಪ್ರಚಾರ ಮಾಡಲು ಅಭ್ಯರ್ಥಿ ಅಥವಾ ಅವರ ತಂದೆ, ಇಲ್ಲವೇ ಬೇರೆಯವರಿಂದ ಹಣ ಪಡೆದಿರುವುದನ್ನು ಸಾಬೀತು ಮಾಡಿದರೆ ಶಾಸಕನಾಗಿ ನಾನು ಕತ್ತೆ ಮೇಲೆ ಕೂತು ಆರೋಪ ಮಾಡಿದವರಿಂದ ಮೆರವಣಿಗೆ ಮಾಡಿಸಿಕೊಳ್ಳುತ್ತೇನೆ. ನನ್ನ ಮೇಲಿನ ಆರೋಪ ಸುಳ್ಳಾಗಿದ್ದರೆ ಸುಳ್ಳು ಆರೋಪ ಮಾಡಿರುವವರು ಕತ್ತೆ ಮೇಲೆ ಕೂತು ಮೆರವಣಿಗೆ ಮಾಡಿಸಿಕೊಳ್ಳುತ್ತಾರೆಯೇ ಎಂದು ಶಾಸಕ ಎಚ್.ಟಿ.ಮಂಜು ಸವಾಲು ಹಾಕಿದರು.
ಪಟ್ಟಣದ ಕೆಪಿಎಸ್ ಶಾಲೆ ಮುಂಭಾಗ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅಭಿಮಾನಿ ಬಳಗ ಮತ್ತು ಚಾಮುಂಡೇಶ್ವರಿ ಬೀದಿ ವ್ಯಾಪಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಬಗ್ಗೆಯೇ ಮಾತನಾಡಬೇಕು. ಆದರೆ, ನಾನು ಅನಿವಾರ್ಯ ಕಾರಣದಿಂದ ನಿಯಮ ಮೀರಿ ಅನ್ಯ ವಿಚಾರವನ್ನು ನನ್ನ ಜನರ ಮುಂದೆ ಪ್ರಸ್ತಾಪಿಸಲೇಬೇಕಾಗಿದೆ ಎಂದರು.
ಕ್ಷೇತ್ರದ ಜವಾಬ್ದಾರಿಯುತ ಜನಪ್ರತಿನಿಧಿಯೊಬ್ಬರು ಫೋನ್ ಸಂಭಾಷಣೆಯೊಂದರಲ್ಲಿ ನಾನು ನಮ್ಮ ಪಕ್ಷದ ಎಂಡಿಸಿಸಿ ಬ್ಯಾಂಕ್ ಚುನಾವಣೆ ಅಭ್ಯರ್ಥಿಯಾಗಿದ್ದ ಧರಣೀಶ್ ಅವರಿಂದ 3 ಕೋಟಿಗೂ ಅಧಿಕ ಹಣ ಪಡೆದು ಅದರಿಂದ ಹೊಸ ಕಾರು ತೆಗೆದುಕೊಂಡಿದ್ದಲ್ಲದೆ ಗಣಪತಿ ಹಬ್ಬದ ಕಾರ್ಯಕ್ರಮ ಮಾಡಿದವರಿಗೆ ಹಂಚಿದ್ದೇನೆ ಎಂದು ಸುಳ್ಳು ಆರೋಪದ ಸಂಭಾಷಣೆ ನಡೆಸಿದ್ದಾರೆ ಎಂದು ಸಂಭಾಷಣೆ ನಡೆದ ಪೋನ್ ನಂಬರ್ ಬಹಿರಂಗಗೊಳಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು- ಗೆಲುವುಗಳು ಸಹಜ. ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಧರಣೀಶ್ ಕೇವಲ ಒಂದು ಮತದ ಅಂತರದಿಂದ ಪರಾಜಿತರಾಗಿದ್ದಾರೆ. ಯಾರಿಂದಲೋ ಹಣ ಪಡೆದ ಕಾರು ತೆಗೆದುಕೊಳ್ಳುವ ಸ್ಥಿತಿ ಬಂದಿಲ್ಲ ಎಂದರು.
ನಾನು ನಮ್ಮ ಅಭ್ಯರ್ಥಿಯಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಪ್ರಮಾಣ ಮಾಡುತ್ತೇನೆ. ನನ್ನ ವಿರುದ್ದ ವ್ಯವಸ್ಥಿತ ಸುಳ್ಳು ಆರೋಪ ಮಾಡಿದವರು ಇದಕ್ಕೆ ಸಿದ್ಧರಿದ್ದಾರಾ? ಎಂದು ಸವಾಲು ಹಾಕಿದರು.ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದಾಳಿ ಮಾಡಿದ ಮರಾಠಿಗರ ನಡೆ ಖಂಡನೀಯ. ಗಡಿನಾಡಿನಲ್ಲಿ ಕನ್ನಡಿಗರ ಮೇಲೆ ನಿರಂತರ ಹಲ್ಲೆಗಳಾಗುತ್ತಿವೆ. ಸರ್ಕಾರ ಹಲ್ಲೆಕೋರರನ್ನು ನಿಯಂತ್ರಿಸಿ ಕನ್ನಡಿಗರ ರಕ್ಷಣೆಗೆ ಮುಂದಾಬೇಕು ಎಂದು ಆಗ್ರಹಿಸಿದರು.
ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಮತ್ತಿತರ ಜನ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ಕಟ್ಟುವವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಭಾರತೀಯ ಸೇನೆ ಯೋಧ ಕಾರ್ತಿಕ್ ಕನ್ನಡ ಧ್ವಜಾರೋಹಣ ಮಾಡಿದರು. ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಪುರಸಭೆಯ ಮಾಜಿ ಸದಸ್ಯರಾದ ಡಿ.ಪ್ರೇಂಕುಮಾರ್, ಎಚ್.ಆರ್.ಲೋಕೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಕನ್ನಡಪರ ಸಂಘಟನೆಗಳಿಗೆ ಸೇರಿದ ಸಮೀರ್, ಜಾವೇದ್, ಕೆ.ಬಿ.ಸಿ ಮಂಜು, ಐನೋರಹಳ್ಳಿ ಮಲ್ಲೇಶ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಬಾವಾಜಿ ಚಂದ್ರು, ಕಾಡಿಮೆಣಸ ಚಂದ್ರು, ಭಾರತೀಪುರ ಪುಟ್ಟಣ್ಣ, ಶೀಳನೆರೆ ಸಿದ್ದೇಶ್, ಪ್ರಕಾಶ್, ಎಂ.ಕೆ.ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಕೆ.ಆರ್.ನೀಲಕಂಠ ಸೇರಿದಂತೆ ಹಲವರಿದ್ದರು.