ಪ್ರಜಾಪ್ರಭುತ್ವಕ್ಕೆ ಸವಾಲಾದ ಸುಳ್ಳು ಸುದ್ದಿ ತಡೆಗೆ ಸನ್ನದ್ಧ

KannadaprabhaNewsNetwork |  
Published : Apr 18, 2026, 01:30 AM IST
17ಕೆಡಿವಿಜಿ6-ದಾವಣಗೆರೆ ವಿವಿಯಲ್ಲಿ ಶುಕ್ರವಾರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ...................17ಕೆಡಿವಿಜಿ7-ದಾವಣಗೆರೆ ವಿಶ್ವವಿದ್ಯಾನಿಲಯ ಶುಕ್ರವಾರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ. | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿವೆ. ಮತದಾರರನ್ನು ದಿಕ್ಕು ತಪ್ಪಿಸುವ ಇಂತಹ ಪ್ರಯತ್ನಗಳನ್ನು ತಡೆಯಲು ಹಾಗೂ ನಿಖರ ಮಾಹಿತಿ ಒದಗಿಸಲು ಚುನಾವಣಾ ಆಯೋಗ ಸನ್ನದ್ಧವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.

- ಜನರ ದಿಕ್ಕು ತಪ್ಪಿಸುವ ಪ್ರಯತ್ನ ತಡೆಗೆ ಒತ್ತು: ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿವೆ. ಮತದಾರರನ್ನು ದಿಕ್ಕು ತಪ್ಪಿಸುವ ಇಂತಹ ಪ್ರಯತ್ನಗಳನ್ನು ತಡೆಯಲು ಹಾಗೂ ನಿಖರ ಮಾಹಿತಿ ಒದಗಿಸಲು ಚುನಾವಣಾ ಆಯೋಗ ಸನ್ನದ್ಧವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಚುನಾವಣಾ ಆಯೋಗದ ಪಾತ್ರ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಕೇವಲ ಒಂದು ಆಡಳಿತ ವ್ಯವಸ್ಥೆಯಲ್ಲ. ಅದು ನಮ್ಮ ಸಂವಿಧಾನದ ಆತ್ಮ. ಈ ಆತ್ಮವನ್ನು ಜೀವಂತವಾಗಿ ಮತ್ತು ಆರೋಗ್ಯವಾಗಿಡುವ ಜವಾಬ್ದಾರಿ ಆಯೋಗದ ಮೇಲಿದೆ ಎಂದರು.

ಪ್ರಜಾಪ್ರಭುತ್ವದ ಯಶಸ್ಸು ಮುಖ್ಯವಾಗಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳ ಮೇಲೆ ಅವಲಂಬಿತವಾಗಿದೆ. ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಈ ಮಹತ್ತರ ಜವಾಬ್ದಾರಿ ಚುನಾವಣಾ ಆಯೋಗ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಒಂದು ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯವೇ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸುವುದಾಗಿದೆ. ಜನಸಾಮಾನ್ಯರ ಧ್ವನಿ ಶಾಸನ ಸಭೆಗಳಲ್ಲಿ ಮೊಳಗಬೇಕಾದರೆ, ಜನರ ಮತಾಧಿಕಾರದ ಹಕ್ಕು ಯಾವುದೇ ಅಡೆತಡೆಯಿಲ್ಲದೆ ಚಲಾವಣೆಯಾಗಬೇಕು ಎಂದು ಹೇಳಿದರು.

ಚುನಾವಣಾ ಆಯೋಗವು ಕೇವಲ ಚುನಾವಣೆ ನಡೆಸುವ ಸಂಸ್ಥೆಯಾಗಿರದೇ, ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಭಯ, ಆಸೆ ಅಥವಾ ಆಮಿಷಗಳಿಲ್ಲದೇ ಮತದಾನ ನಡೆಯುವುದನ್ನು ಖಚಿತಪಡಿಸುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕು. ಚುನಾವಣಾ ಮಾದರಿ ನೀತಿಸಂಹಿತೆಯ ಕಟ್ಟುನಿಟ್ಟಾದ ಜಾರಿ ನಮ್ಮ ಪ್ರಜಾಪ್ರಭುತ್ವದ ಪಾವಿತ್ರ್ಯತೆ ಕಾಪಾಡುತ್ತದೆ. ಯಾವೊಬ್ಬ ಮತದಾರನೂ ಬಿಟ್ಟು ಹೋಗದಿರಲಿ ಎಂಬುದು ಚುನಾವಣಾ ಆಯೋಗದ ಮೂಲಮಂತ್ರ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಮತದಾನದ ಪ್ರಕ್ರಿಯೆ ಸುಲಭ ಮತ್ತು ನಿರಾಳವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಮನೆ ಬಾಗಿಲಿನಿಂದಲೇ ಮತದಾನ ಮಾಡುವ ಸೌಲಭ್ಯಗಳು ಈ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿವೆ. ಮತದಾರರನ್ನು ದಿಕ್ಕು ತಪ್ಪಿಸುವ ಇಂತಹ ಪ್ರಯತ್ನಗಳ ತಡೆ ಹಾಗೂ ನಿಖರ ಮಾಹಿತಿ ಒದಗಿಸಲು ಚುನಾವಣಾ ಆಯೋಗ ಸನ್ನದ್ಧವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಸ್ಪಷ್ಟಪಡಿಸಿದರು.

ತುಮಕೂರು ವಿವಿ ಪ್ರಾಧ್ಯಾಪಕ ಡಾ. ಕೆ.ಸಿ.ಸುರೇಶ ಮಾತನಾಡಿ, ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು, ಚಿಹ್ನೆ ಹಂಚುವುದು ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣಿಡುವುದು ಹಾಗೂ ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ಮೂಲಕ ಚುನಾವಣಾ ಭ್ರಷ್ಟಾಚಾರವನ್ನು ಆಯೋಗ ನಿಯಂತ್ರಿಸುತ್ತದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ, ಪಾರದರ್ಶಕತೆ ಹೆಚ್ಚಿಸಲು ತಂತ್ರಜ್ಞಾನದ ಬಳಕೆ ಅನಿವಾರ್ಯ ಎಂದರು.

ದಾವಣಗೆರೆ ವಿ.ವಿ. ಕುಲಸಚಿವ ಎಸ್.ಬಿ.ಗಂಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಅಶೋಕಕುಮಾರ ಪಾಳೇದ, ಪ್ರಾಧ್ಯಾಪಕರಾದ ಪ್ರೊ. ಜೆ.ಕೆ.ರಾಜು, ಡಾ. ಟಿ.ಎಲ್. ಪ್ರವೀಣ, ಡಾ.ನಾಗರಾಜ, ಡಾ.ಬಸವರಾಜ ಬೆನಕನಹಳ್ಳಿ, ಡಾ.ಜ್ಯೋತಿ, ಡಾ.ನಾಗಭೂಷಣ ಗೌಡ, ಮದಕರಿ ನಾಯಕ, ಡಾ.ಯಜ್ಞಶ್ರೀ, ಡಾ.ಸ್ವಾಮಿ, ಕಾರ್ಯಕ್ರಮ ಸಂಯೋಜಕ ಡಾ. ಶ್ರೀಧರ ಬಾರ್ಕಿ, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

- - -

(ಟಾಪ್‌ ಕೋಟ್‌)

ಇವಿಎಂ ಮತ್ತು ಇವಿ ಪ್ಯಾಟ್‌ಗಳ ಬಳಕೆ ಮತದಾನದ ಪ್ರಕ್ರಿಯೆಯಲ್ಲಿ ನಿಖರತೆ ತಂದಿದೆ. ಸಿ-ವಿಜಿಲ್ ಆ್ಯಪ್ ಮೂಲಕ ಚುನಾವಣಾ ಅಕ್ರಮಗಳ ವಿರುದ್ಧ ಧ್ವನಿಯೆತ್ತಬಹುದು. ಚುನಾವಣಾ ಆಯೋಗದ ಕಣ್ಣಾಗಿ ಕೆಲಸ ಮಾಡಬಹುದು. ಇದು ಪ್ರಜಾಪ್ರಭುತ್ವದಲ್ಲಿ ಜನರ ನೇರ ಭಾಗವಹಿಸುವಿಕೆಗೆ ಉತ್ತಮ ಉದಾಹರಣೆ. ಜನರು ಸಹ ಸ್ವಯಂ ಪ್ರೇರಣೆಯಿಂದ ಚುನಾವಣೆ ವೇಳೆ ಮತಗಟ್ಟೆಗೆ ತೆರಳಿ, ತಮ್ಮ ಮತ ಚಲಾಯಿಸಬೇಕು. ಮತದಾನ ಪ್ರಮಾಣವೂ ಹೆಚ್ಚಾಗಬೇಕು.

- ಡಾ. ಕೆ.ಸಿ.ಸುರೇಶ, ಪ್ರಾಧ್ಯಾಪಕ, ತುಮಕೂರು ವಿವಿ.

- - -

-17ಕೆಡಿವಿಜಿ6: ದಾವಣಗೆರೆ ವಿ.ವಿ.ಯಲ್ಲಿ ಶುಕ್ರವಾರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಕಾರ್ಯಾಗಾರವನ್ನು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ, ರಕ್ತದಾನ ಅತ್ಯಂತ ಶ್ರೇಷ್ಠ: ಸಂಜೀವ್ ಕುಮಾರ್
ಅಗಳಗಂಡಿ ಪಂಚಾಯ್ತಿ ಕಾರೆಮನೆ ದಲಿತ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಿ