ಕಾಂಗ್ರೆಸ್‌ನ ಅಸಲಿ ಮುಖ ಬಯಲು: ಡಾ.ಸಿ.ಎನ್.ಅಶ್ವತ್ಥನಾರಾಯಣ

KannadaprabhaNewsNetwork |  
Published : Apr 22, 2026, 01:30 AM IST
೨೧ಕೆಎಂಎನ್‌ಡಿ-೪ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು. | Kannada Prabha

ಸಾರಾಂಶ

ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆಯನ್ನು ತರಲು ಪ್ರಧಾನಿ ಮೋದಿ ಅವರು ಸಂಸತ್‌ನಲ್ಲಿ ಮಂಡಿಸಿದಾಗ ಪ್ರತಿಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರಕೂಟಗಳ ಬೆಂಬಲ ಇಲ್ಲದೆ ಸೋಲಾಗಿದ್ದು, ಈ ಮೂಲಕ ಕಾಂಗ್ರೆಸ್ ಅಸಲಿ ಮುಖ ಬಯಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆಯನ್ನು ತರಲು ಪ್ರಧಾನಿ ಮೋದಿ ಅವರು ಸಂಸತ್‌ನಲ್ಲಿ ಮಂಡಿಸಿದಾಗ ಪ್ರತಿಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರಕೂಟಗಳ ಬೆಂಬಲ ಇಲ್ಲದೆ ಸೋಲಾಗಿದ್ದು, ಈ ಮೂಲಕ ಕಾಂಗ್ರೆಸ್ ಅಸಲಿ ಮುಖ ಬಯಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಮೀಸಲಾತಿ ಕೊಡಬಾರದು ಎಂಬುದು ಕಾಂಗ್ರೆಸ್ ನಿಲುವಾಗಿದೆ. ಕೇವಲ ತೋರ್ಪಡಿಕೆಗೆ ಮಾತ್ರ ಮಹಿಳೆಯರ ಪರ ಎನ್ನುತ್ತಾರೆ. ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ್ದಾದರೂ ಏಕೆ? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಮಹಿಳಾ ಮೀಸಲಾತಿಗೆ ಬೆಂಬಲ ನೀಡದೆ ಇಂದು ಏನೇನೋ ಕಾರಣ ಕೊಡುತ್ತಿದ್ದಾರೆ. ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸುತ್ತಿದ್ದಾರೆ. ಕ್ಷೇತ್ರ ಮರುವಿಂಗಡಣೆಯಾದರೆ ದಕ್ಷಿಣ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕಾಂಗ್ರೆಸ್‌ನವರು ದೇಶ ಒಡೆಯುವ ಮತ್ತು ಮಹಿಳಾ ವಿರೋಧಿತನವನ್ನು ಮಾಡುತ್ತಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಗೆ ಏಕೆ ಆತುರ ಎನ್ನುತ್ತಿದ್ದಾರೆ. ೧೯೭೧ರ ಜನಗಣತಿ ಆಧಾರದ ಮೇಲೆ ೫೪೩ ಲೋಕಸಭಾ ಕ್ಷೇತ್ರಗಳಿವೆ. ಆ ಸಂದರ್ಭ ೫೫ ಕೋಟಿ ಜನಸಂಖ್ಯೆ ಇತ್ತು. ಪ್ರಸ್ತುತ ೧೪೦ ಕೋಟಿ ಜನಸಂಖ್ಯೆ ಇದೆ. ಹಾಗಾಗಿ ಮಹಿಳೆಯರಿಗೆ ಮೀಸಲಾತಿ ನೀಡಿ ಕ್ಷೇತ್ರ ಮರುವಿಂಗಡಣೆಗೆ ಪ್ರಧಾನಿ ಮೋದಿ ಮುಂದಾದರು. ಆದರೆ, ಕಾಂಗ್ರೆಸ್‌ನವರು ಬೆಂಬಲ ನೀಡದೆ ಅನುಷ್ಠಾನವಾಗದಂತೆ ಮಾಡಿದರು ಎಂದು ದೂರಿದರು.

ಪ್ರಧಾನಿ ಮೋದಿ ಅವರು ಅತ್ಯಂತ ಹಿಂದುಳಿದ ವರ್ಗದವರು. ಹಾಗಾಗಿ ಹಿಂದುಳಿದ ವರ್ಗದವರಿಗೂ ನ್ಯಾಯ ಒದಗಿಸುವ ಮನಸ್ಸು ಮಾಡಿದರು. ದಲಿತ, ರೈತರು, ಹಿಂದುಳಿದವರ ಪರ ಕೆಲಸ ಮಾಡುತ್ತಿದ್ದಾರೆ. ನೂರಾರು ಯೋಜನೆ ಜಾರಿಗೆ ತಂದಿದ್ದಾರೆ. ಕಾಂಗ್ರೆಸ್‌ನವರ ಆರೋಪಗಳೆಲ್ಲವೂ ಆಧಾರರಹಿತ ಮತ್ತು ಕಪೋಲಕಲ್ಪಿತ ಎಂದು ಟೀಕಿಸಿದರು.

ಪ್ರಧಾನಿಗಳು ೨೦೧೧ರ ಜನಗಣತಿ ಆಧಾರದ ಮೇಲೆ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ತೀರ್ಮಾನಿಸಿ ಅದರಂತೆ ಅನುಷ್ಠಾನಗೊಳಿಸಲು ಮುಂದಾದರು. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಬೆಂಬಲ ನೀಡಲಿಲ್ಲ. ಒಂದು ದೇಶ ಒಂದು ಚುನಾವಣೆ, ರಾಷ್ಟ್ರೀಯ ಶಿಕ್ಷಣ ನೀತಿ, ದೇಶ ಕಟ್ಟುವ ಕೆಲಸ ಮತ್ತು ಕೋವಿಡ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಕಾಂಗ್ರೆಸ್ಸಿಗರು ನಿರಂತರವಾಗಿ ವಿರೋಧ ಮಾಡುತ್ತಲೇ ಬಂದಿದ್ದಾರೆ. ಚುನಾವಣೆ ಸಂದರ್ಭ ಬಂದಾಗ ಮಾತ್ರ ಇಂತಹ ಯೋಜನೆಗಳನ್ನು ಜಾರಿಗೆ ತರಲು ಮುಂದಾಗುತ್ತಾರೆ ಎಂಬ ಆರೋಪ ನಿರಾಧಾರ ಎಂದರು.

ಕಾಂಗ್ರೆಸ್ ನಾಯಕರ ಢೋಂಗಿ ರಾಜಕಾರಣ ದೇಶದ ಜನತೆಗೆ ಅರ್ಥವಾಗಿರುವುದರಿಂದಲೇ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಒಂದು ಪ್ರಾದೇಶಿಕ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿಯೂ ಇರಲಾರದು ಎಂದು ಭವಿಷ್ಯ ನುಡಿದರು.

ಮಹಿಳಾ ಮೀಸಲಾತಿಗೆ ಬೆಂಬಲ ನೀಡದ ಕಾಂಗ್ರೆಸ್ ಪಕ್ಷದ ಮುಖವಾಡವನ್ನು ಇಡೀ ದೇಶದ ಜನತೆಗೆ ತೋರಿಸಬೇಕೆಂಬ ಉದ್ದೇಶದಿಂದಲೇ ರಾಷ್ಟ್ರೀಯ ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಬೇಕಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ನ ಢೋಂಗಿ ರಾಜಕಾರಣವನ್ನು ಇಡೀ ದೇಶದ ಜನತೆಗೆ ತಿಳಿಸಲು ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಈ ಬಗ್ಗೆ ರೂಪು-ರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅಶ್ವತ್ಥ ನಾರಾಯಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ, ಜಿಲ್ಲಾಧ್ಯಕ್ಷೆ ಮಂಗಳಾ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ. ಸಿದ್ದರಾಮಯ್ಯ, ಅಶೋಕ್ ಜಯರಾಂ, ರೂಪಾ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣದ ಹೆಸರಿನಲ್ಲಿ ಮಹಿಳೆಯರಿಗೆ ಅನ್ಯಾಯ: ಶುಭದಾಯಿನಿ
ಕಬ್ಬಿನ ಬಾಕಿ ಪಾವತಿಗೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ