ಉಡುಪಿ ಕೃಷ್ಣಮಠಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ

KannadaprabhaNewsNetwork |  
Published : Dec 30, 2024, 01:01 AM IST
29ಉಪೇಂದ್ರ | Kannada Prabha

ಸಾರಾಂಶ

ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಯುಐ ಸಿನಿಮಾದ ನಾಯಕ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ, ನಿರ್ಮಾಪಕ ಲಹರಿ ವೇಲು ಹಾಗು ಸಿನಿಮಾ ತಂಡದವರು ಭಾನುವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಉಡುಪಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಯುಐ ಸಿನಿಮಾದ ನಾಯಕ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ, ನಿರ್ಮಾಪಕ ಲಹರಿ ವೇಲು ಹಾಗು ಸಿನಿಮಾ ತಂಡದವರು ಭಾನುವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕೃಷ್ಣ ದರ್ಶನದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂಧ್ರತೀರ್ಥರನ್ನು ಭೇಟಿಯಾದ ಉಪೇಂದ್ರ, ಭಗವದ್ಗೀತೆಯ ಬಗ್ಗೆ ಸುದೀರ್ಘ ಮಾತುಕತೆ ನಡೆಸಿ, ಗೀತಾ ಮಂದಿರ ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ, ಶ್ರೀಗಳ ಜೊತೆ ಭಗವದ್ಗೀತೆ ಬಗ್ಗೆ ಮಾತನಾಡಿದ ಬಳಿಕ ನನ್ನ ತಲೆಯಲ್ಲಿದ್ದ ವಿಚಾರಗಳು ಉದುರಿ ಹೋಗಿ ಖಾಲಿಯಾಗಿದೆ. ಅವರ ಮಾತು ಕೇಳುತ್ತಾ ಇರೋಣ ಅನಿಸುತ್ತಿದೆ. ಮನುಷ್ಯ ನಾನು ಅಂತ ಬಂದಾಗ ತುಂಬಾ ಸಫರ್ ಆಗ್ತಾನೆ, ನೀನು ಎಂದಾಗ ತುಂಬಾ ಹಗುರ ಆಗುತ್ತಾನೆ‌. ಇದರಲ್ಲೇ ಎಲ್ಲ ವಿಷಯಗಳು ಅಡಗಿವೆ ಎಂದರು.

ಯುಐ ಸಿನಿಮಾ ಜನರ ಆರ್ಶೀವಾದದಿಂದ ತುಂಬಾ ಚೆನ್ನಾಗಿ ಪ್ರದರ್ಶನಗೊಳ್ಳುತ್ತಿದೆ. ನಮ್ಮೆಲ್ಲರನ್ನು ಒಂದು ಶಕ್ತಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂಬ ಸತ್ಯದ ಅರಿವಾಗಿದೆ. ನಾನು ಏನು ಮಾಡುತ್ತಿಲ್ಲ ಅನ್ನುವುದು ನನಗೆ ಖಂಡಿತ ಗೊತ್ತಾಗಿದೆ ಎಂದವರು ನುಡಿದರು. ಯುಐ- 2 ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ಎಲ್ಲವೂ ದೈವೇಚ್ಛೆ ಎಂದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದ್ದು, ಸದ್ಯದಲ್ಲೇ ಅವರು ಬೆಂಗಳೂರಿಗೆ ಹಿಂದಿರುಗುತ್ತಾರೆ. ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿಯಾಗುತ್ತೇನೆ. ಶಿವರಾಜ್ ಕುಮಾರ್ ಇನ್ನೂ ನೂರಾರು ಚಿತ್ರಗಳನ್ನು ಮಾಡಬೇಕು, ಅವರ ಜೊತೆ ನಾನು ಕೂಡ ಚಿತ್ರ ಮಾಡಬೇಕು ಎಂದರು.

ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಅಭಿನಯಿಸುತ್ತಿದ್ದು, ಶೂಟಿಂಗ್ ನಡೆಯುತ್ತಿದೆ, ಇನ್ನೊಂದು ಶೆಡ್ಯೂಲ್ ಇದೆ. ಮಾರ್ಚ್, ಏಪ್ರಿಲ್ ವೇಳೆಗೆ ಬಿಡುಗಡೆ ಆಗಬಹುದು ಎಂದರು. ಪರ್ಯಾಯ ಪುತ್ತಿಗೆ ಮಠದಿಂದ ನಟನಿಗೆ ಗೌರವಾರ್ಪಣೆ ಮಾಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಮಾತನಾಡಿ, ಚಿತ್ರರಂಗದಲ್ಲಿ ಮೌಲ್ಯಭರಿತ ನಡೆ ತೋರಿದ ವ್ಯಕ್ತಿ ಉಪೇಂದ್ರ. ಕೇವಲ ಗ್ಲಾಮರ್ ಹಿಂದೆ ಹೋಗದೆ ಜನರಿಗೆ ಸರಿಯಾದ ದಾರಿ ತೋರಿಸುವ ನಿರ್ದೇಶಕ ಇವರಾಗಿದ್ದು, ಮೌಲ್ಯಗಳನ್ನು ಅವರು ಎತ್ತಿ ಹಿಡಿಯುವ ಕಾರಣ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ ಎಂದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ