ಸಾಸ್ತಾನ ಟೋಲ್‌ನಲ್ಲಿ ಮತ್ತೆ ಸ್ಥಳೀಯರಿಂದ ಶುಲ್ಕ ಸಂಗ್ರಹ: ನಾಳೆ ಪ್ರತಿಭಟನೆ

KannadaprabhaNewsNetwork |  
Published : Dec 30, 2024, 01:01 AM IST
28ಟೋಲ್‌ | Kannada Prabha

ಸಾರಾಂಶ

ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ, ನಾಗರಿಕರು, ಸಂಘ-ಸಂಸ್ಥೆಗಳು, ಸ್ಥಳೀಯ ಗ್ರಾ.ಪಂ.ಗಳು, ಪ.ಪಂ. ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡದ ಕೆಕೆಆರ್ ಟೋಲ್ ಕಂಪನಿ ವಿರುದ್ಧ ಪುನಃ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ, ನಾಗರಿಕರು, ಸಂಘ-ಸಂಸ್ಥೆಗಳು, ಸ್ಥಳೀಯ ಗ್ರಾ.ಪಂ.ಗಳು, ಪ.ಪಂ. ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡದ ಕೆಕೆಆರ್ ಟೋಲ್ ಕಂಪನಿ ವಿರುದ್ಧ ಪುನಃ ಆಕ್ರೋಶ ವ್ಯಕ್ತವಾಗಿದೆ. ಇದರ ವಿರುದ್ಧ ಮಂಗಳವಾರ ಕೋಟ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೆಳಗ್ಗೆ 9.30ರಿಂದ ಟೋಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಅಂದ್ರಾದೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಸ್ತಾನ ಟೋಲ್‌ನಲ್ಲಿ ಹಿಂದೆ ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋಟ ಜಿಪಂ ವ್ಯಾಪ್ತಿಯ ಎಲ್ಲ ವಾಹನಗಳಿಗೂ ಟೋಲ್ ವಿನಾಯಿತಿ ನೀಡಲಾಗಿತ್ತು ಹಾಗೂ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಎಲ್ಲಾ ವಾಹನಗಳು ಉಚಿತವಾಗಿ ಪ್ರಯಾಣಿಸುತ್ತಿದ್ದವು. ಆದರೆ ಇತ್ತೀಚೆಗೆ ಟೋಲ್ ವ್ಯವಸ್ಥೆ ಮತ್ತು ರಸ್ತೆ ನಿರ್ವಹಣೆ ಗುತ್ತಿಗೆದಾರ ಕಂಪನಿಯು ಟೋಲ್ ಗುತ್ತಿಗೆ ಮತ್ತು ನಿರ್ವಹಣೆಯ ಹೊಣೆಯನ್ನು ಕಂಪನಿಗೆ ಮಾರಾಟ ಮಾಡಿದ್ದು, ಇದೀಗ ಆ ಸಂಸ್ಥೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ಪಡೆಯಲು ಪ್ರಾರಂಭಿಸಿದೆ ಎಂದರು.

ಜಿಲ್ಲಾಡಳಿತ ಮತ್ತು ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಥಾಸ್ಥಿತಿ ಕಾಪಾಡಲು ಕಂಪೆನಿಗೆ ನಿರ್ದೇಶನ ನೀಡಲಾಗಿತ್ತು. ಆದರೆ ಇತ್ತೀಚೆಗೆ ಮತ್ತೊಮ್ಮೆ ವಾಣಿಜ್ಯ ವಾಹನಗಳಿಗೆ ಶುಲ್ಕ ಪಡೆಯಲು ಡಿ.30ರ ನಂತರ ಪ್ರಾರಂಭಿಸುವುದಾಗಿ ತಿಳಿದುಬಂದಿದೆ. ಕಂಪೆನಿ ರಸ್ತೆಯನ್ನು ಗುತ್ತಿಗೆ ಪಡೆದು ಒಂದು ವರ್ಷವಾದರೂ ಕೂಡ ಸಮರ್ಪಕವಾಗಿ ರಸ್ತೆ ನಿರ್ವಹಣೆಯನ್ನು ಮಾಡದೆ ಉಡಾಫೆ ಪ್ರವೃತ್ತಿಯನ್ನು ತೋರಿಸುತ್ತಿದೆ ಮತ್ತು ಅವರಿಂದ ಸಮರ್ಪಕ ಕಾಮಗಾರಿ ಮಾಡಿಸಲಾಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ದಾರಿದೀಪ ನಿರ್ವಹಣೆ ತೀವ್ರ ಕಳಪೆಯಾಗಿದೆ. ಪಾದಚಾರಿ ದಾರಿಗಳಲ್ಲಿ ಭಾರಿ ಗಾತ್ರದ ಹೊಂಡಗಳು ಬಿದ್ದು ನಡೆಯುವುದೇ ಕಷ್ಟವಾಗಿದೆ. ಡಿವೈಡರ್‌ಗಳ ಬದಿಯಲ್ಲಿ ಕಸದ ರಾಶಿಗಳು ಮಣ್ಣುಗಳು ಬಿದ್ದು ಕೊಂಡಿದೆ. ರಸ್ತೆ ಬದಿಯಲ್ಲಿ ಹುಲ್ಲುಗಳು ಹುಲುಸಾಗಿ ಬೆಳೆದು ನಿಂತಿವೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ್ ಪೂಜಾರಿ, ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಸುಶೀಲ ಪೂಜಾರಿ, ಐರೋಡಿ ಗ್ರಾಪಂ ಸದಸ್ಯ ನಟರಾಜ್ ಗಾಣಿಗ, ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಶೆಟ್ಟಿ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ವಡ್ಡರ್ಸೆ ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಲಾರಿ ಮಾಲಕರ ಸಂಘದ ಗೌರವಾಧ್ಯಕ್ಷ ಭೋಜ ಪೂಜಾರಿ, ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರಾದ ನಾಗರಾಜ ಗಾಣಿಗ, ಪ್ರಶಾಂತ್ ಶೆಟ್ಟಿ ಸಂದೀಪ್ ಕುಂದರ್, ಮಹಾಬಲ ಪೂಜಾರಿ ಉಪಸ್ಥಿತರಿದ್ದರು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ